ಚುನಾವಣೆ ನಂತರ ವಿಳಾಸ ಇಲ್ಲದಂತಾಗಲಿದೆ ಕಾಂಗ್ರೆಸ್

bjp_20240416003733115.jpg
Published on

ದಾವಣಗೆರೆ : ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷವು ವಿಳಾಸ ಇಲ್ಲದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
 ಮಾಯಕೊಂಡ ವಿಧಾನಸಭಾ ಕ್ಷೇತ್ರದ ತ್ಯಾವಣಿಗೆ ಗ್ರಾಮದಲ್ಲಿ ಸೋಮವಾರ, ಬಿಜೆಪಿ, ಜೆಡಿಎಸ್, ಜೆಡಿಯುನ ಬಹಿರಂಗ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
 ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ 2-3 ಕ್ಷೇತ್ರಗಳ ಹೆಸರು ಹೇಳಲಿ ಎಂದು ಆ ಪಕ್ಷದ ನಾಯಕರಿಗೆ ಸವಾಲು ಹಾಕಿದ ಅವರು, ಬಿಜೆಪಿ ಎಲ್ಲ 28 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಇಷ್ಟು ವರ್ಷ ಹಣ, ಹೆಂಡ, ತೋಳ್ಬಲ, ಅಧಿಕಾರ ಬಲದಿಂದ ಜಾತಿಯ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರುತ್ತಿದೆ. ಈಗ ಜನ ಬುದ್ಧಿವಂತರಾಗಿದ್ದಾರೆ. ಕಾಂಗ್ರೆಸ್‌ನ ರಾಜಕೀಯ ದೊಂಬರಾಟ ಇನ್ನು ನಡೆಯುವುದಿಲ್ಲ ಎಂದರು.
 ಕಾಂಗ್ರೆಸ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರೋಧಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಇಟ್ಟಿದ್ದ 11 ಸಾವಿರ ಕೋಟಿ ರೂ.ಗಳನ್ನು ಬೇರೆಯ ಉದ್ದೇಶಕ್ಕೆ ಬಳಸಿ ಅವರಿಗೆ ಅನ್ಯಾಯ ಮಾಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದರೂ ಕಾಂಗ್ರೆಸ್ ನಾಯಕರು ಬರಲಿಲ್ಲ. ಅವರೆಲ್ಲ ಶ್ರೀರಾಮನ ವಿರೋಧಿಗಳು ಎಂದು ಹೇಳಿದರು.
 ಗಾಯತ್ರಿ ಸಿದ್ದೇಶ್ವರ 1.5 ಲಕ್ಷದಿಂದ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.
 ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಇದು ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟವಾಗಿದೆ. ಜನರು ಮೈಮರೆತರೆ ಅಧರ್ಮ ತಾಂಡವವಾಡುತ್ತದೆ. ದೇಶದ ಸುರಕ್ಷತೆ, ಬದಲಾವಣೆ, ಮಹಿಳಾ ಸಬಲೀಕರಣ, ಯುವ ಸಬಲೀಕರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆಯಿದೆ ಎಂದರು.
 ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಇಷ್ಟು ವರ್ಷ ದಾವಣಗೆರೆ ನಗರ ಬಿಟ್ಟು ಹಳ್ಳಿಗಳಿಗೆ ಹೋಗಿಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ, ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
 ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿದರು. ಮಾಜಿ ಸಚಿವ ಮುರುಗೇಶ್ ನಿರಾಣಿ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಜಿ.ಎಸ್. ಅನಿತ್ ಕುಮಾರ್, ಅಶ್ವಿನಿ, ಜಿ.ಎಸ್. ಶ್ಯಾಮ್, ವಾಗ್ಮಿ ಹಾರಿಕಾ ಮಂಜುನಾಥ್, ದೇವೇಂದ್ರಪ್ಪ, ಗಂಗಾಧರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net