

ದಾವಣಗೆರೆ : ಕಾಂಗ್ರೆಸ್‌ನವರು ರಂಜಾನ್ ಹಿನ್ನೆಲೆಯಲ್ಲಿ ಮುಸ್ಲಿಂ ಮತದಾರರ ಓಲೈಕೆಗಾಗಿ ಅಕ್ಕಿ ಮತ್ತಿತರ ದಿನಸಿ ಸಾಮಗ್ರಿಗಳನ್ನು ವಿತರಿಸಿದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಗತ್‌ಸಿಂಗ್ ನಗರ, ವಿನೋಬನಗರ ಸೇರಿ ಹಲವೆಡೆ ಕಾಂಗ್ರೆಸ್ ಮುಖಂಡರು 5 ಕೆಜಿ ಅಕ್ಕಿ, ಅರ್ಧ ಕೆಜಿ ಸಕ್ಕರೆ ಮತ್ತು ಅರ್ಧ ಕೆಜಿ ಅಡುಗೆ ಎಣ್ಣೆ ಇರುವ ದಿನಸಿ ಕಿಟ್ ವಿತರಿಸುತ್ತಿರುವುದು ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ಮುನ್ಸೂಚನೆ ಗೊತ್ತಾಗಿದೆ. ಆ ಕಾರಣಕ್ಕಾಗಿಯೆ ಮತದಾರರಿಗೆ ಆಮಿಷ ತೋರಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಈ ದುಸ್ಥಿತಿ ಬರಬಾರದಾಗಿತ್ತು ಎಂದು ಹೇಳಿದರು.
ಪಕ್ಷದ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಎ.ಸಿ. ರಾಘವೇಂದ್ರ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಟ್ರಸ್ಟಿಯಾಗಿರುವ ಎಸ್‌ಎಸ್ ಕೇರ್ ಟ್ರಸ್ಟ್ ಮೂಲಕ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿರುವುದು, ಜಿಲ್ಲಾ ಉಸ್ತುವಾರಿ ಸಚಿವರ ಒಡೆತನದ ವಿದ್ಯಾಸಂಸ್ಥೆ ಆವರಣದಲ್ಲಿ ಧನ್ವಂತರಿ ಪೂಜೆ ಹೆಸರಲ್ಲಿ ಸಾರ್ವಜನಿಕರಿಗೆ ಊಟೋಪಚಾರಕ್ಕೆ ವ್ಯವಸ್ಥೆ ಮಾಡಿರುವುದು ಸೇರಿ ಒಟ್ಟು 4 ದೂರುಗಳನ್ನು ಜಿಲ್ಲಾ ಚುನಾವಣಾಧಿಕಾರಿಗೆ ನೀಡಿದ್ದೇವೆ ಎಂದರು.
ಈ ಬಗ್ಗೆ ಇದುವರೆಗೂ ಯಾವುದೇ ಹಿಂಬರಹ ನೀಡಿಲ್ಲ. ಉಸ್ತುವಾರಿ ಸಚಿವರ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಸಹಾಯಕ ಚುನಾವಣಾಕಾರಿಗಳಾದ ಪಾಲಿಕೆ ಆಯುಕ್ತೆ ರೇಣುಕಾ, ಉಪ ಆಯುಕ್ತೆ ಲಕ್ಷ್ಮೀದೇವಿ ಅವರನ್ನು ವರ್ಗಾವಣೆ ಮಾಡುವಂತೆ ರಾಜ್ಯ ಮತ್ತು ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.
ಪಕ್ಷದ ಮುಖಂಡರಾದ ದಿವಾಕರ್, ಹನುಮಂತಪ್ಪ, ಅನಿಲ್ ಕುಮಾರ್ ನಾಯ್ಕ, ಎಚ್.ಪಿ. ವಿಶ್ವಾಸ್, ಟಿಂಕರ್ ಮಂಜಣ್ಣ, ಕಿಶೋರ್ ಕುಮಾರ್, ಬಾತಿ ಶಿವಣ್ಣ ಇದ್ದರು.