

ದಾವಣಗೆರೆ : ಮುಂಬರುವ 2047ರ ವೇಳೆಗೆ ವಿಕಸಿತ ಭಾರತ ಹೇಗಿರಬೇಕು ಎಂಬುದರ ಕುರಿತು ಜನಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹಿಸುವ ಮೂಲಕ ಮಾರ್ಗಸೂಚಿ ತಯಾರಿಸುವುದು ಪ್ರಧಾನಿ ಮೋದಿಯವರ ಪ್ರಮುಖ ಉದ್ದೇಶ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿದ್ದ ವಿಕಸಿತ ಭಾರತ ಸಂಕಲ್ಪ ಅಭಿಯಾನ ಉದ್ಘಾಟನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಬಿಜೆಪಿ ಸರ್ಕಾರ ಹಿಂದಿನ ಪ್ರಣಾಳಿಕೆಯ ಹತ್ತಾರು ಸಂಕಲ್ಪ ಪೂರೈಸಿದೆ. ಮುಂದಿನ ಭಾರತಕ್ಕಾಗಿ ಹೊಸ ಸಂಕಲ್ಪ ಮಾಡಲು ಹೊರಟಿದೆ. ನೂರು ವರ್ಷಗಳ ಸ್ವಾತಂತ್ರೃ ಭಾರತದಲ್ಲಿ ದೇಶದ ಮಹಿಳೆಯರ ಸ್ಥಿತಿಗತಿ, ಯವಜನರ ಭವಿಷ್ಯ ಹೇಗಿರಬೇಕು ಹಾಗೂ ಕೃಷಿಕರಿಗೆ ಬೇಕಾದ ಸಹಕಾರ ಮೊದಲಾದವು ನೆರವೇರಲಿವೆ ಎಂದು ತಿಳಿಸಿದರು.
ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ದೇಶದ ಬಡವರು, ಯುವಜನರು, ಕೃಷಿಕರು ಹಾಗೂ ನಾರೀಶಕ್ತಿ ನಾಲ್ಕು ವರ್ಗ ಗುರುತಿಸಿ ಸೌಲಭ್ಯ ಒದಗಿಸಿದೆ. ದೇಶದ 147 ಕೋಟಿ ಜನರಿಗೂ ಸರ್ಕಾರದ ಯೋಜನೆಗಳು ತಲುಪಿವೆ. ಪ್ರತಿಯೊಬ್ಬರೂ ಒಂದಿಲ್ಲೊಂದು ಯೋಜನೆಗಳ ಫಲಾನುಭವಿಯಾಗಿದ್ದಾರೆ ಎಂದರು.
ದೇಶದಲ್ಲಿ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆದು ಸುಗಮ ಬದುಕು ನಡೆಸಲು ಸಾಧ್ಯವಾಗಿದೆ. ಜನ್‌ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್, ಜನೌಷಧಿ ಕೇಂದ್ರ, ಮಹಿಳೆಯರಿಗೆ ಶೇ.33 ಮೀಸಲು, ವಿಶ್ವಕರ್ಮ ಯೋಜನೆ, 370ನೇ ವಿಧಿ ರದ್ದು, ರಾಮಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ ಮೊದಲಾದವು ದೇಶದ ಜನತೆಗೆ ನೀಡಿದ ಪ್ರಮುಖ ಯೋಜನೆಗಳಾಗಿವೆ ಎಂದು ಹೇಳಿದರು.
ದೇಶದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿವೆ. ಆದರೆ, ಭಾರತವನ್ನು ವಿಶ್ವಗುರು ಮಾಡಬೇಕೆಂದರೆ ಸಮರ್ಥ ನಾಯಕತ್ವ ಅವಶ್ಯಕ. ಅದು ನರೆಂದ್ರ ಮೋದಿಯವರಲ್ಲಿದೆ. ವಿಕಸಿತ ಭಾರತ ಕಲ್ಪನೆ ಒಬ್ಬ ವಿಶ್ವ ನಾಯಕನಿಗೆ ಮಾತ್ರ ಸಾಧ್ಯ. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಸಂಕಲ್ಪ ಅಭಿಯಾನ ನಡೆಯಲಿದೆ. ಸುಮಾರು 1 ಕೋಟಿ ಜನರ ಸಲಹೆ ಪಡೆಯುವುದು ಮೋದಿಯವರ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಚಾಲಕ ದತ್ತಾತ್ರೇಯ ಮಾತನಾಡಿ, 2014ರ ಹಿಂದಿನ ಭಾರತಕ್ಕೂ ನಂತರದ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ದೊಡ್ಡ ರೂಪಾಂತರ ಕಂಡಿದ್ದೇವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು ವಿಶ್ವದಲ್ಲಿಯೇ 5ನೇ ಆರ್ಥಿಕ ಶಕ್ತಿಯಾಗಿ ರೂಪಿಸಿದೆ. ಡಿಜಿಟಲ್ ಇಂಡಿಯಾ ಇಡೀ ವಿಶ್ವದಲ್ಲೇ ನಂ.1 ಆಗಿ ಹೊರಹೊಮ್ಮಿದೆ ಎಂದರು.
ಕೇಂದ್ರ ಬಿಜೆಪಿ ಸರ್ಕಾರ 2014ರ ಪ್ರಣಾಳಿಕೆಯಲ್ಲಿ ನೀಡಿದ್ದ 234 ಆಶ್ವಾಸನೆಗಳಲ್ಲಿ 222 ಹಾಗೂ 2019ರ 239 ಭರವಸೆಗಳಲ್ಲಿ 228ನ್ನು ಈಡೇರಿಸುವ ಮೂಲಕ ದೇಶವನ್ನು ವಿಶ್ವದಲ್ಲೇ ಅತ್ಯಂತ ದೊಡ್ಡ ಶಕ್ತಿಯಾಗಿ ರೂಪಿಸಿದೆ. ದೇಶವನ್ನು ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಿ ರೂಪಿಸುವುದು ಹಾಗೂ ವಿಶ್ವದ ನಂಬರ್ ಒನ್ ಮಾಡಬೇಕೆಂಬ ವಿಕಸಿತ ಭಾರತ ಕಲ್ಪನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮುಖಂಡರಾದ ಡಿ.ಎಸ್. ಶಿವಶಂಕರ್, ಬಿ.ಎಂ. ಸತೀಶ್, ಹನುಮಂತನಾಯ್ಕ, ವಕೀಲ ರಾಘವೇಂದ್ರ, ಅಣ್ಣೇಶ್ ಇತರರಿದ್ದರು. ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೇಬಾಳ್ ಸ್ವಾಗತಿಸಿದರು.
ಮಗ್‌ಶಾಟ್ ಮಾಳವಿಕಾ