

ದಾವಣಗೆರೆ : ರಾಜ್ಯ ಸರ್ಕಾರದ ದ್ವಿಮುಖ ನೀತಿ ಹಾಗೂ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಪಕ್ಷದ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಂಡಿದ್ದನ್ನು ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಪಕ್ಷದ ಜಿಲ್ಲಾ ಕಚೇರಿಯ ಬಳಿ ಸೇರಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಹ ಸಂಯೋಜಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಸಮಾಜ ಘಾತುಕರಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿ, ದಾವಣಗೆರೆಯ ವ್ಯಕ್ತಿಯೊಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವರು, ಆರೋಪಿಗಳನ್ನು ಈಗಲೇ ಉಗ್ರಗಾಮಿಗಳು ಎಂದು ಕರೆಯಲು ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಕೈ ಬಿಡುತ್ತಿದೆ. ಪಠ್ಯದಲ್ಲೂ ಬದಲಾವಣೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದನದಲ್ಲಿ 10 ಜನ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ಕ್ರಮವನ್ನು ಖಂಡಿಸಿದ ಅವರು, ಸ್ಪೀಕರ್ ರಾಜೀನಾಮೆಗೆ ರಾಜ್ಯಪಾಲರು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿಯ ವಿರೋಧಿಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ, ಮತಾಂತರ ತಡೆ ಕಾಯ್ದೆಗಳನ್ನು ಕೈಬಿಡಲಾಗಿದೆ. ಇದು ಸೇಡಿನ ರಾಜಕಾರಣವೇ ಹೊರತು ಜನಹಿತದ ಕ್ರಮವಲ್ಲ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯ ವೇಳೆ ನಾಯಕರ ಉಪಚಾರಕ್ಕೆ 30ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿದ್ದು ಖಂಡನೀಯ. ರಾಜ್ಯಾದ್ಯಂತ ಮಳೆಯ ಕೊರತೆಯಿದ್ದರೂ ಬರಗಾಲದ ಘೋಷಣೆ ಮಾಡಿಲ್ಲ ಎಂದು ಟೀಕಿಸಿದರು.
ಮಾಯಕೊಂಡ ದ ಮಾಜಿ ಶಾಸಕ ಪ್ರೊ.ಎನ್. ಲಿಂಗಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ದಾವಣಗೆರೆ ಉತ್ತರದ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಪ್ರಸನ್ನಕುಮಾರ್, ಕೆ.ಎಂ. ವೀರೇಶ್, ಎಲ್.ಡಿ. ಗೋಣೆಪ್ಪ, ದೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಕೆ.ಎಂ. ಸುರೇಶ್ ಪಾಲ್ಗೊಂಡಿದ್ದರು.
ಪಕ್ಷದ ಮುಖಂಡರಾದ ಕೆ.ಎನ್. ಓಂಕಾರಪ್ಪ, ಬಿ.ಜಿ. ಅಜಯಕುಮಾರ್, ಬಿ.ಎಂ. ಸತೀಶ್, ಶ್ರೀನಿವಾಸ ದಾಸಕರಿಯಪ್ಪ, ಸಿದ್ದಪ್ಪ, ಜಿ.ಎಸ್. ಶ್ಯಾಮ್, ಎಚ್.ಎನ್. ಶಿವಕುಮಾರ್, ಮಂಜುಳಾ ಮಹೇಶ್, ಭಾಗ್ಯಾ ಪಿಸಾಳೆ, ಧನಂಜಯ ಕಡ್ಲೇಬಾಳ್, ರಮೇಶ ನಾಯ್ಕ, ಪಿ.ಸಿ. ಶ್ರೀನಿವಾಸ್, ಶಿವನಗೌಡ ಇದ್ದರು.