

ದಾವಣಗೆರೆ : ಬಿಜೆಪಿ ರಾಜ್ಯ ಘಟಕದ ಸೂಚನೆಯ ಮೇರೆಗೆ ಪಕ್ಷದ ಬರ ಅಧ್ಯಯನ ತಂಡ ನ. 6ರಂದು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಈ ತಂಡದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಹರಿಹರ ಶಾಸಕ ಬಿ.ಪಿ. ಹರೀಶ್ ಇರುವರು ಎಂದು ತಿಳಿಸಿದರು.
ಅಂದು ಬೆಳಗ್ಗೆ 10.30ರಿಂದ ಹರಿಹರ ತಾಲೂಕಿನಲ್ಲಿ, ಮಧ್ಯಾಹ್ನ 12 ಗಂಟೆಯಿಂದ ಹೊನ್ನಾಳಿ ತಾಲೂಕಿನಲ್ಲಿ, 1 ಗಂಟೆಯಿಂದ ಚನ್ನಗಿರಿಯಲ್ಲಿ, 3 ಗಂಟೆಯಿಂದ ಮಾಯಕೊಡದಲ್ಲಿ ಹಾಗೂ ಸಂಜೆ 4 ಗಂಟೆಯಿಂದ ಜಗಳೂರು ತಾಲೂಕಿನಲ್ಲಿ ತಂಡವು ಬರ ಅಧ್ಯಯನ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ರೈತರೊಂದಿಗೆ ಚರ್ಚೆ ನಡೆಸಲಿರುವ ತಂಡದ ಸದಸ್ಯರು, ಅವರ ಸಂಕಷ್ಟವನ್ನು ಆಲಿಸಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ಬರ ನಿರ್ವಹಣೆ ಕಾಮಗಾರಿ ಕೈಗೊಳ್ಳುವುದಲ್ಲದೆ, ಕೇಂದ್ರ ಸರ್ಕಾರದಿಂದಲೂ ಅನುದಾನ ಕೊಡಿಸಲು ಒತ್ತಾಯಿಸಲಿದೆ ಎಂದು ಹೇಳಿದರು.
ಪಕ್ಷದ ಮುಖಂಡರಾದ ಮಂಜಾ ನಾಯ್ಕ, ಶ್ರೀನಿವಾಸ ದಾಸಕರಿಯಪ್ಪ, ಶಿವರಾಜ ಪಾಟೀಲ್, ಲೋಕಿಕೆರೆ ನಾಗರಾಜ್, ಹನುಮಂತ ನಾಯ್ಕ, ಗೌಳಿ ಲಿಂಗರಾಜ್, ಎಚ್.ಪಿ. ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿದ್ದರು.