ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ

dvg-bjp-20.jpg
Published on

ದಾವಣಗೆರೆ : ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದನ್ನು ಸ್ವಾಗತಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಬುಧವಾರ ಸಂಭ್ರಮಾಚರಣೆ ಮಾಡಿದರು.
 ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿದ ಕಾರ್ಯಕರ್ತೆಯರು ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
 ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್ ಮಾತನಾಡಿ, ಇದೊಂದು ಐತಿಹಾಸಿಕ ನಿರ್ಧಾರ. ಸ್ವಾತಂತ್ರಾೃ ನಂತರ ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನವರು ಇಚ್ಛಾಶಕ್ತಿ ಪ್ರದರ್ಶಿಸಿರಲಿಲ್ಲ. ಇದನ್ನು ಕಾರ್ಯಗತಗೊಳಿಸಲು ನರೇಂದ್ರ ಮೋದಿ ಅವರೇ ಬರಬೇಕಾಯಿತು ಎಂದು ಹೇಳಿದರು.
 ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಮುಂತಾದವರು ಯಶಸ್ವಿ ಆಡಳಿತ ನಡೆಸಿದ ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ. ಮಹಿಳೆಯರು ಸಮರ್ಥರಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗುವ ಮೂಲಕ ವಿಕಸಿತ ಭಾರತವನ್ನು ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
 ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಾತನಾಡಿ, ಕುಟುಂಬ ನಿರ್ವಹಣೆ ಮಾಡಿ ಅನುಭವ ಇರುವ ಮಹಿಳೆಯರು ಆಡಳಿತವನ್ನೂ ಮಾಡಬಲ್ಲರು ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಪುಷ್ಪಾ ವಾಲಿ ಮಾತನಾಡಿದರು. ದಾಕ್ಷಾಯಿಣಮ್ಮ, ಗೌರಮ್ಮ, ವೀಣಾ, ಮಮತಾ, ರೂಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net