

ದಾವಣಗೆರೆ : ಬಿಸಿಯೂಟ ತಯಾರಕರಿಗೆ ಆಗಸ್ಟ್‌ನಿಂದ ಬಾಕಿ ಉಳಿದ ಮೂರು ತಿಂಗಳ ವೇತನ ಬಿಡುಗಡೆಗೊಳಿಸಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮ್ಮತಿಸಿದ್ದಾರೆ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಸಮಗ್ರ ಶಿಕ್ಷಣ ಯೋಜನಾಧಿಕಾರಿ ಸಭಾಂಗಣದಲ್ಲಿ ಬುಧವಾರ ಎಐಟಿಯುಸಿ ಬಿಸಿಯೂಟ ತಯಾರಕರ ಮತ್ತು ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಬೇಡಿಕೆಗೆ ಸಚಿವರು ಸ್ಪಂದಿಸಿದ್ದಾರೆ. ಎಲ್ಲ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಹಂತ ಹಂತವಾಗಿ ಬಿಸಿಯೂಟ ತಯಾರಕರ ಬೇಡಿಕೆ ಈಡೇರಿಸಲಾಗುವುದು. ವೇತನ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಜತೆ ಮಾತನಾಡುವುದಾಗಿ ಭರವಸೆ ನೀಡಿದರು. ಆಗಸ್ಟ್‌ನಿಂದ ಬಾಕಿಯಿರುವ ವೇತನ ಬಿಡುಗಡೆ ಮಾಡಬೇಕು, ಮರಣ ಪರಿಹಾರ ಜಾರಿಗೊಳಿಸಬೇಕು, ನಿವೃತ್ತ ಬಿಸಿಯೂಟ ತಯಾರಕರಿಗೆ ಘೋಷಣೆಯಾದ ಇಡುಗಂಟು ಹಣ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 10 ರಿಂದ ವರ್ಷ ಅಡುಗೆ ತಯಾರಕರಾಗಿ ಕೆಲಸ ನಿರ್ವಹಿಸಿದವರಿಗೂ ಇಡುಗಂಟು ಹಣ ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು ಐದನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು, ಎಸ್ ಡಿ ಎಂ ಸಿ ಮತ್ತು ಮುಖ್ಯ ಶಿಕ್ಷಕರ ಜಂಟಿ ಖಾತೆ ರದ್ದುಗೊಳಿಸಿ ಮುಖ್ಯ ಶಿಕ್ಷಕರು ಮತ್ತು ಅಡುಗೆಯವರ ಬ್ಯಾಂಕ್ ಜಂಟಿ ಖಾತೆ ಪುನಃ ಮುಂದುವರಿಸಬೇಕು ಎಂದು ಆಗ್ರಹಿಸಲಾಯಿತು. ಶಾಲೆಯಲ್ಲಿ ಹೆಚ್ಚುವರಿ ಕೆಲಸ ಇರುವುದರಿಂದ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಕೊಡುವಂತೆ ಒತ್ತಾಯಿಸಲಾಯಿತು. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನಿತೇಶ್ ಕುಮಾರ್, ಶಿಕ್ಷಣ ಇಲಾಖೆ ಕಮಿಷನರ್ ತ್ರಿಲೋಕ ಚಂದ್ರ, ಮಧ್ಯಾಹ್ನದ ಉಪಾಹಾರ ಯೋಜನೆ ನಿರ್ದೇಶಕ ಕುರ್ಮಾ ರಾವ್ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ರಾಜ್ಯ ಪ್ರಧಾನ ಕಾರ್ಯದರ್ಶಿ, ಆವರಗೆರೆ ಚಂದ್ರು ಮುಖಂಡರಾದ ನಿರ್ಮಲಾ, ಶಶಿಕಲಾ ಸಭೆಯಲ್ಲಿದ್ದರು.