

ದಾವಣಗೆರೆ : ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಮ್ಮ 93ನೇ ಜನ್ಮದಿನವನ್ನು ಶುಕ್ರವಾರ ಕುಟುಂಬದ ಸದಸ್ಯರು, ಬಂಧು ಬಾಂಧವರು, ಅಭಿಮಾನಿಗಳ ಜತೆಯಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು.
ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಬೆಳಗ್ಗೆಯಿಂದಲೇ ಅಭಿಮಾನಿಗಳು, ಹಿತೈಷಿಗಳು, ಅಧಿಕಾರಿಗಳು ಆಗಮಿಸಿ ಶುಭಾಶಯ ಕೋರಿದರು. ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವುದು ಸೇರಿ ಹಲವು ಸೇವಾ ಕಾರ್ಯಗಳನ್ನು ನೆರವೇರಿಸಲಾಯಿತು.
ದಾವಣಗೆರೆ ಮಹಾನಗರ ಪಾಲಿಕೆಯಿಂದ ದೊಡ್ಡ ಬೂದಿಹಾಳ್ ರಸ್ತೆಯಲ್ಲಿ ನಿರ್ಮಿಸಿದ ಜಿ-ಪ್ಲಸ್ ಒನ್ ಮಾದರಿಯ 381 ಮನೆಗಳನ್ನು ಶಾಮನೂರು ಶಿವಶಂಕರಪ್ಪ ಪೌರಕಾರ್ಮಿಕರಿಗೆ ಹಸ್ತಾಂತರಿಸಿದರು. ಪೌರ ಕಾರ್ಮಿಕರಿಗೆ ಸುರಕ್ಷಾ ಉಡುಪುಗಳು ಮತ್ತು 1 ಸಾವಿರ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಜನ್ಮ ದಿನಾಚರಣೆ ಅಂಗವಾಗಿ ಜೆಜೆಎಂ ಹಾಗೂ ಎಸ್‌ಎಸ್ ಮೆಡಿಕಲ್ ಕಾಲೇಜುಗಳಲ್ಲಿ 200 ಜನ ರಕ್ತದಾನ ಮಾಡಿದರು.
ಪುತ್ರರಾದ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಎಸ್.ಎಸ್. ಮಲ್ಲಿಕಾರ್ಜುನ್, ಪುತ್ರಿಯರಾದ ಡಾ. ಮಂಜುಳ, ಸುಧಾ, ಡಾ.ಶೈಲಾ, ಮೀನಾ ಪಾಟೀಲ್, ಸೊಸೆಯಂದಿರಾದ ಪ್ರೀತಿ ಬಕ್ಕೇಶ್, ರೇಖಾ ಗಣೇಶ್, ಪ್ರಭಾ ಮಲ್ಲಿಕಾರ್ಜುನ್, ಮೊಮ್ಮಕ್ಕಳು, ಕುಟುಂಬದ ಇತರ ಸದಸ್ಯರು, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ ಸೇರಿ ಹಿತೈಷಿಗಳು ಜನ್ಮ ದಿನಾಚರಣೆಯಲ್ಲಿ ಭಾಗಿಯಾಗಿದ್ದರು. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಸೇರಿ ಹಲವು ಜನಪ್ರತಿನಿಧಿಗಳು ಶುಭ ಹಾರೈಸಿದರು.
...
* ಜನರ ಆಶೀರ್ವಾದದಿಂದ ಆರೋಗ್ಯ
ಜನರ ಆಶೀರ್ವಾದದಿಂದ ತಾವು ಇಷ್ಟು ವರ್ಷ ರೋಗ ರುಜಿನಗಳಿಲ್ಲದೆ ಆರೋಗ್ಯವಾಗಿರುವುದಾಗಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಎಸ್.ಎಸ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ತಮ್ಮ ಜನ್ಮದಿನ ಸಮಾರಂಭದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಮಾತನಾಡಿ, ನಿಮ್ಮೆಲ್ಲರ ಹಾರೈಕೆ ಇರುವುದರಿಂದ ಮುಂದೆಯೂ ಹೀಗೇ ಸ್ವಸ್ಥವಾಗಿರುತ್ತೇನೆ, ಪ್ರತಿ ವರ್ಷ ನಿಮ್ಮೆಲ್ಲರ ಜತೆಗೆ ಇದೇ ರೀತಿ ಜನ್ಮದಿನ ಆಚರಿಸೋಣ ಎಂದು ಹೇಳಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಡಾ.ಶಾಮನೂರು ಶಿವಶಂಕರಪ್ಪ ಅವರು 7 ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು ಹಲವು ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸಮಾಜವನ್ನು ಒಗ್ಗೂಡಿಸಿ ಮುನ್ನಡೆಸಿದ್ದಾರೆ ಎಂದರು.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ, ಸೇವಾ ಕ್ಷೇತ್ರ ಸೇರಿ ಹಲವು ರಂಗಗಳಲ್ಲಿ ಅವರ ಕೊಡುಗೆ ಇದೆ. ಈ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ವಿಧಾನಸಭಾ ಚುನಾವಣೆ ಎದುರಿಸಿ ಸಿಕ್ಸರ್ ಬಾರಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಸಿಎಂ ಆಗಬಹುದಿತ್ತು ಎಂದರು.
ಅವರೊಬ್ಬ ಧೈರ್ಯವಂತ, ಕೊಡುಗೈ ದಾನಿ, ಅವರು ಮಾಡಿರುವ ಸಮಾಜಸೇವಾ ಕಾರ್ಯಗಳು ಅಜರಾಮರ ಎಂದು ಬಣ್ಣಿಸಿದರು.
ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಡಾ.ಶಾಮನೂರು ಶಿವಶಂಕರಪ್ಪ ಒಬ್ಬ ತ್ಯಾಗ ಜೀವಿ. ಸಾಮಾನ್ಯ ಕುಟುಂಬದಿಂದ ಬಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಶ್ರೀಮಂತಿಕೆ ಇದ್ದರೂ ಅಹಂಕಾರವಿಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಾರೆ ಎಂದು ಹೇಳಿದರು.
ಸಮಾಜಕ್ಕೆ ಅವರ ಕೊಡುಗೆ ದೊಡ್ಡದು. ಕೋವಿಡ್ ಆತಂಕದ ಸಂದರ್ಭದಲ್ಲಿ 8-9 ಕೋಟಿ ರೂ. ಸ್ವಂತ ಹಣವನ್ನು ಖರ್ಚು ಮಾಡಿ ಜನರಿಗೆ ಲಸಿಕೆ ಕೊಡಿಸಿದರು. ಬಡ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಉದ್ಯಮಿ ಎಸ್.ಎಸ್. ಗಣೇಶ್, ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಪ್ರಸನ್ನ, ಮೇಯರ್ ವಿನಾಯಕ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಇದ್ದರು. ನಂತರ ವೀರಶೈವ ಮಹಾಸಭಾ ವತಿಯಿಂದ ಎಂಬಿಎ ಕಾಲೇಜಿನಲ್ಲಿ ಜನ್ಮ ದಿನಾಚರಣೆ ನಡೆಯಿತು.