ಬಣ ರಾಜಕಾರಣದ ಶಕ್ತಿ ಪ್ರದರ್ಶನ

dvg-siddeshwara-birthday.jpg
Published on

ದಾವಣಗೆರೆ  : ನಗರದ ಅಭಿನವ ರೇಣುಕ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ, ಕೇಂದ್ರದ ಮಾಜಿ ಸಚಿವ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನಾಚರಣೆ ಸಮಾರಂಭವು ಬಿಜೆಪಿಯೊಳಗಿನ ಬಣ ರಾಜಕಾರಣದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.  ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಹಸ್ರಾರು ಅಭಿಮಾನಿಗಳು, ಕಾರ್ಯಕರ್ತರು ಸಾಕ್ಷಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ಬೆಳಕಿಗೆ ಬಂದವು. ಕಳೆದ ಲೋಕಸಭಾ ಚುನಾವಣೆಯ ನಂತರ ನಡೆದಿರುವ ಬೆಳವಣಿಗೆಗಳನ್ನು ಮೆಲುಕು ಹಾಕುವ ಜತೆಗೆ ವಿರೋಧಿ ಬಣಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಯಿತು.  ಸಮಾರಂಭದಲ್ಲಿ ಮಾತನಾಡಿದ ನಾಯಕರೆಲ್ಲರೂ ಮಾಜಿ ಸಂಸದರಾದ ಜಿ. ಮಲ್ಲಿಕಾರ್ಜುನಪ್ಪ ಹಾಗೂ ಜಿ.ಎಂ. ಸಿದ್ದೇಶ್ವರ ಅವರು ಬಿಜೆಪಿಗೆ ಮತ್ತು ದಾವಣಗೆರೆ ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.  ಕಳೆದ ಚುನಾವಣೆಯಲ್ಲಿ ಆಗಿರುವ ಸೋಲಿನಿಂದ ಧೃತಿಗೆಟ್ಟಿಲ್ಲ. ಮುಂಬರುವ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸವನ್ನು ಸಿದ್ದೇಶ್ವರ ಬಣದ ಮುಖಂಡರು ವ್ಯಕ್ತಪಡಿಸಿದರು.  ವೇದಿಕೆಯಲ್ಲಿ ಕೇಳಿಬಂದ ಮಾತುಗಳು ಕೇವಲ ದಾವಣಗೆರೆ ಜಿಲ್ಲೆಗೆ ಸೀಮಿತವಾಗಿರದೇ ರಾಜ್ಯ ಬಿಜೆಪಿಯಲ್ಲಿ ನಡೆದಿರುವ ವಿದ್ಯಮಾನಗಳಿಗೂ ಕನ್ನಡಿ ಹಿಡಿದಂತಿದ್ದವು.  ಮಾಜಿ ಸಚಿವ ಅರವಿಂದ್ ಲಿಂಬಾವಳಿ ಮಾತನಾಡಿ, ಎಸ್.ಎ. ರವೀಂದ್ರನಾಥ್ ಜನ್ಮ ದಿನಾಚರಣೆಗೆ ಬಂದಿದ್ದ ಬಿ.ಎಸ್. ಯಡಿಯೂರಪ್ಪ ಅವರು ಜಿ.ಎಂ. ಸಿದ್ದೇಶ್ವರ ಹುಟ್ಟು ಹಬ್ಬಕ್ಕೆ ಬರದೇ ಇರುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.  ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ ಸ್ನೇಹಿತನನ್ನು ಬಿಎಸ್‌ವೈ ನಡೆಸಿಕೊಂಡ ರೀತಿ ನನಗೆ ಬೇಸರ ತರಿಸಿದೆ ಎಂದರು.  ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ತುಮಕೂರಿನಲ್ಲಿ ಮಲ್ಲಿಕಾರ್ಜುನಯ್ಯ, ದಾವಣಗೆರೆಯಲ್ಲಿ ಜಿ. ಮಲ್ಲಿಕಾರ್ಜುನಪ್ಪ ಅವರು ಪಕ್ಷವನ್ನು ಕಟ್ಟಿ ಬೆಳೆಸಿದರು ಎಂದು ಸ್ಮರಿಸಿದರು. ಸಂಸದರಾಗಿ ಜಿ.ಎಂ. ಸಿದ್ದೇಶ್ವರ ಮಾಡಿರುವ ಸಾಧನೆಗಳನ್ನು ವಿವರಿಸಿದರು.  ಅಧ್ಯಕ್ಷತೆ ವಹಿಸಿದ್ದ ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಪಕ್ಷದ ಶಿಸ್ತು ಸಮಿತಿಯಿಂದ ನಾನು ಈಗಾಗಲೇ ನೋಟಿಸ್ ಪಡೆದಿದ್ದೇನೆ. ಮತ್ತೇನಾದರೂ ಮಾತನಾಡಿದರೆ ಮತ್ತೊಂದು ನೋಟಿಸ್ ಕೊಡಬಹುದು ಎಂಬ ಕಾರಣಕ್ಕೆ ನನಗೆ ಅಧ್ಯಕ್ಷ ಭಾಷಣ ನೀಡಿದ್ದಾರೆ ಎಂದು ಚಟಾಕಿ ಹಾರಿಸಿದರು.  ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿದರು. ಗಾಯತ್ರಿ ಸಿದ್ದೇಶ್ವರ ಇದ್ದರು.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net