

ದಾವಣಗೆರೆ : ಭಾರತವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹಾಗೂ ನಂಬರ್ ಒನ್ ದೇಶವನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ನಮಗೆಲ್ಲ ಮಾದರಿ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹೇಳಿದರು. ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಸೋಮವಾರ, ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಜನರೇ ತಂದೆ-ತಾಯಿ, ಬಂಧು-ಬಳಗ, ಸಹೋದರ-ಸಹೋದರಿಯರು ಎಂದು ಭಾವಿಸಿರುವ ಮೋದಿ ಅವರು ತಮ್ಮ ಜೀವನವನ್ನು ದೇಶದ ಏಳಿಗೆಗಾಗಿ ಮುಡಿಪಾಗಿಟ್ಟಿದ್ದಾರೆ. ಅವರ ಸಾಧನೆಗೆ ಹೋಲಿಕೆ ಮಾಡಿಕೊಂಡರೆ ನಾವು ಮಾಡುತ್ತಿರುವ ಸಮಾಜಮುಖಿ ಕಾರ್ಯ ಶೂನ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಎಂ ವಿಶ್ವವಿದ್ಯಾಲಯವನ್ನು ಕರ್ನಾಟಕದ ನಂಬರ್ ಒನ್ ವಿವಿಯಾಗಿ ಮಾಡಲು ಅಧ್ಯಾಪಕರು ಪ್ರಯತ್ನಿಸಬೇಕು ಎಂದು ತಿಳಿಸಿದರು. ಜಿಎಂಯು ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಮಾತನಾಡಿದರು. ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್, ಆಡಳಿತಾಧಿಕಾರಿ ಡಾ. ವೈ.ಯು. ಸುಭಾಷ್, ಸಿಂಡಿಕೇಟ್ ಮಾಜಿ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ಜಿಎಂ ಸೌಹಾರ್ದ ಪತ್ತಿನ ಸಹಕಾರ ಸಂಘದ ಪ್ರಧಾನ ವ್ಯವಸ್ಥಾಪಕ ಎಸ್.ಎನ್. ಮಲ್ಲಪ್ಪ, ಜಿ.ಎನ್. ರಾಜೀವ್ ಇದ್ದರು. ಸಿದೇಶ್ವರ ಅವರು ಕೇಕ್ ಕತ್ತರಿಸಿ, ಸಿಹಿ ವಿನಿಮಯದ ಮೂಲಕ ಜನ್ಮದಿನ ಆಚರಿಸಿಕೊಂಡರು. ಜಿಎಂಯು ಕ್ಯಾಂಪಸ್‌ನಲ್ಲಿ ವಿವಿಧ ಹಣ್ಣುಗಳ ಸಸಿಗಳನ್ನು ನೆಟ್ಟು ಪ್ರಕೃತಿ ಪ್ರೇಮ ಮೆರೆದರು.