ಸಮಾನತೆ, ಸಂವಿಧಾನದ ಬಗ್ಗೆ ಗೌರವ

dvg-babu-jagajeevan-ram.jpg
Published on

ದಾವಣಗೆರೆ : ಸಮಾನತೆಯ ಆಶಯ ಮತ್ತು ಸಂವಿಧಾನದ ಬಗ್ಗೆ ಗೌರವ ಬೆಳೆಸಿಕೊಂಡು ನಾಡನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಬೇಕಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ದೇಶಕ್ಕಾಗಿ ಕೊಡುಗೆ ನೀಡಿದ ಹಲವಾರು ಮಹನೀಯರ ಜನ್ಮ ದಿನಾಚರಣೆಯನ್ನು ವರ್ಷವಿಡೀ ಮಾಡುತ್ತೇವೆ. ಆದರೆ ಅವರ ಆದರ್ಶ, ವಿಚಾರಗಳಿಂದ ನಾವು ಕಲಿತ ಪಾಠವೇನು, ಅದರಿಂದ ನಮ್ಮೊಳಗೆ ಮತ್ತು ಸಮಾಜದಲ್ಲಿ ಮಾಡಿರುವ ಬದಲಾವಣೆ ಏನು ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.  ಬಾಬು ಜಗಜೀವನ್ ರಾಂ ಅವರು ಬಾಲ್ಯದಿಂದಲೇ ಸಮಾಜದಲ್ಲಿರುವ ಅಸಮಾನತೆಯನ್ನು ಗುರುತಿಸಿದರು. ಶೋಷಣೆ, ಅಸ್ಪಶ್ಯತೆಯ ವಿರುದ್ಧ ಧ್ವನಿ ಎತ್ತಿದರು. ಆ ಹಂತದಲ್ಲೇ ಅವರಲ್ಲಿ ವೈಚಾರಿಕ ಚಿಂತೆನಗಳು ಮೂಡಿದವು. ನಂತರದ ದಿನಗಳಲ್ಲಿ ಹೋರಾಟದ ಮೂಲಕ ಸಮಾನತೆ ತರಲು ಶ್ರಮಿಸಿದರು ಎಂದರು.  ನಾಯಕತ್ವವು ಪದವಿಯಿಂದ ಬರುವುದಿಲ್ಲ, ಸರಿ-ತಪ್ಪುಗಳ ವಿವೇಚನೆ, ನಮ್ಮ ಆಲೋಚನೆ ಮತ್ತು ಕ್ರಿಯೆಗಳು ಹೇಗಿವೆ ಎಂಬುದನ್ನು ಅವಲಂಬಿಸಿರುತ್ತದೆ ಎಂದು ಅಭಿಪ್ರಾಯಪಟ್ಟರು.  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯ ಆಶಯವೂ ಸಾಮಾಜಿಕ ಸಮಾನತೆ, ಸಂವಿಧಾನವನ್ನು ಗೌರವಿಸುವುದು, ಮಹಿಳೆಯರು, ರೈತರು ಇನ್ನಿತರರ ಹಕ್ಕುಗಳ ರಕ್ಷಣೆಯೇ ಆಗಿತ್ತು ಎಂದು ನೆನಪು ಮಾಡಿಕೊಂಡರು.  ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಬಾಬು ಜಗಜೀವನ್ ರಾಂ ಅವರು ಶೋಷಣೆ, ಅಸಮಾನತೆಯ ವಿರುದ್ಧ ಹೋರಾಡಿದರು. ಆ ಸಂದರ್ಭದಲ್ಲಿದ್ದ ಸಂಕಟಗಳು ಈಗಲೂ ಹೊಸ ರೂಪದಲ್ಲಿವೆ. ಅವುಗಳ ವಿರುದ್ಧ ನಾವು ಧ್ವನಿ ಎತ್ತಬೇಕಿದೆ ಎಂದು ಹೇಳಿದರು.  ಬಾಬೂಜಿ ಅವರಿಗೆ ರಾಜಕಾರಣದಲ್ಲಿ ಶತ್ರುಗಳೇ ಇರಲಿಲ್ಲ. ಅವರು ಕೇಂದ್ರದಲ್ಲಿ ಸಚಿವರಾಗಿ ಹಲವಾರು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದರು. ದೇಶದಲ್ಲಿ ಹಸಿರು ಕ್ರಾಂತಿಯಾಗಲು ಕಾರಣರಾದರು. ಬಾಂಗ್ಲಾ ವಿಮುಕ್ತಿಯಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದು ಸ್ಮರಿಸಿದರು.  ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಡಾ. ಸುರೇಶ ಬಿ. ಇಟ್ನಾಳ್, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ್, ಪಾಲಿಕೆ ಆಯುಕ್ತೆ ರೇಣುಕಾ, ದೂಡಾ ಆಯುಕ್ತ ಹುಲ್ಮನಿ ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರವಿನಾರಾಯಣ್, ರುದ್ರಮುನಿ, ಮುಖಂಡರಾದ ಸೋಮ್ಲಾಪುರ ಹನುಮಂತಪ್ಪ, ಮಲ್ಲೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net