

ದಾವಣಗೆರೆ : ಹನ್ನೆರಡನೇ ಶತಮಾನದ ಬಸವಾದಿ ಶರಣರ ತತ್ವ ರೂಢಿಸಿಕೊಂಡು ಆದರ್ಶ ಮಾರ್ಗದಲ್ಲಿ ನಡೆದಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿ ತ್ಯಾಗಕ್ಕೆ ಮಾತ್ರ ಗೌರವವಿದೆ. ಬುದ್ಧ, ಬಸವ, ಅಂಬೇಡ್ಕರ್ ಮೊದಲಾದವರು ಸಮಾಜಕ್ಕಾಗಿ ಮಾಡಿದ ತ್ಯಾಗ ಹಾಗೂ ನೀಡಿದ ಕೊಡುಗೆಯಿಂದ ಸದಾ ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು. ಕಾಯಕವೇ ಕೈಲಾಸ ಎಂಬುದು ಬಸವಾದಿ ಶರಣರ ಮೂಲಮಂತ್ರವಾಗಿದ್ದು, ಸಮಾಜದ ಪ್ರತಿಯೊಬ್ಬರೂ ಇದರ ಆಚರಣೆಗೆ ಬದ್ಧರಾಗಬೇಕು. ಶರಣರ ತತ್ವ ಹಾಗೂ ಆದರ್ಶ ಅಳವಡಿಕೊಂಡು ಕೆಲಸ ನಿರ್ವಹಿಸಬೇಕು ಎಂದರು. ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಭರಮಪ್ಪ ಉಪನ್ಯಾಸ ನೀಡಿ, ಬಸವಣ್ಣನವರು ಸಮಸಮಾಜದ ನಿರ್ಮಾಣಕ್ಕಾಗಿ 179 ವೃತ್ತಿಗಳ ಶರಣರನ್ನು ಒಗ್ಗೂಡಿಸಿ ಅನುಭವ ಮಂಟಪ ನಿರ್ಮಿಸಿದರು. ಆದರೆ, 900 ವರ್ಷ ಕಳೆದರೂ ಸಮಾಜದಲ್ಲಿ ಲಿಂಗ ಮತ್ತು ವರ್ಗ ತಾರತಮ್ಯ ಹಾಗೂ ಅಸಮಾನತೆ ನಿವಾರಣೆಯಾಗಿಲ್ಲ ಎಂದು ಹೇಳಿದರು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರು ಸುಮಾರು 251 ಅದ್ಭುತ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲಿದ್ದಾರೆ. ಹಡಪದ ಸಮಾಜ ಗೌರವದಿಂದ ಕಾಣುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು. ಎಸ್‌ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಎಡಿಸಿ ಪಿ.ಎನ್. ಲೋಕೇಶ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣಾನಾಯ್ಕ, ಉಪ ವಿಭಾಗಾಧಿಕಾರಿ ಅಭಿಷೇಕ್ ಹೆಗಡೆ, ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಶಶಿಧರ್ ಬಸಾಪುರ ಇತರರು ಭಾಗವಹಿಸಿದ್ದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಹಾಗೂ ಹಡಪದ ಅಪ್ಪಣ್ಣ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು, ಬಸವ ಕಲಾಲೋಕ ಹಾಗೂ ಕದಳಿ ಮಹಿಳಾ ವೇದಿಕೆ ಸದಸ್ಯರು ವಚನಗೀತೆ ಹಾಡಿದರು.