ವಚನ ಸಾಹಿತ್ಯಕ್ಕೆ ಫ.ಗು. ಹಳಕಟ್ಟಿ ಕೊಡುಗೆ ಅವಿಸ್ಮರಣೀಯ

halakatti.jpg
Published on

ದಾವಣಗೆರೆ : ಡಾ. ಫ.ಗು. ಹಳಕಟ್ಟಿ ಅವರು ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಜನತೆಗೆ ಪರಿಚಯಿಸುವ ಮೂಲಕ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ, ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಹನ್ನೆರಡನೇ ಶತಮಾನದ ವಚನ ಸಾಹಿತ್ಯ ನಮಗೆ ಇಷ್ಟೊಂದು ಸುಲಭವಾಗಿ ಸಿಗುತ್ತಿದೆ ಎಂದರೆ ಡಾ. ಹಳಕಟ್ಟಿ ಅವರೇ ಅದಕ್ಕೆ ಮೂಲ ಕಾರಣ. ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ತಾಳೆಗರಿಗಳನ್ನು ದೇಶದ ವಿವಿಧ ಭಾಗಗಳಲ್ಲಿ ಹುಡುಕಿ, ಸಂಗ್ರಹಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಗ್ರಂಥ ರೂಪದಲ್ಲಿ ಮುದ್ರಿಸಿದರು ಎಂದರು.  ವಚನಗಳಲ್ಲಿರುವ ಮಾನವೀಯ ಮೌಲ್ಯಗಳು, ಜೀವನ ಸಂದೇಶಗಳು ವಿಶ್ವಶಾಂತಿ, ವಿಶ್ವಪ್ರೇಮವನ್ನು ಮೂಡಿಸುತ್ತವೆ. ಶರಣರು ತಮ್ಮ ಜೀವನದ ಅನುಭವಗಳನ್ನು ವೇದ, ಉಪನಿಷತ್ತುಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ವಚನಗಳ ಮೂಲಕ ರಚಿಸಿದರು. ಸಮಾಜದಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯಿಂದ ಹಳಕಟ್ಟಿ ಅವರು ಸಂಶೋಧನೆ ನಡೆಸಿದರು ಎಂದು ಹೇಳಿದರು.  ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿ, ಹಳಕಟ್ಟಿ ಅವರು ಬಾಲ್ಯದಿಂದಲೂ ತಂದೆಯ ಸಾಹಿತ್ಯ ವಲಯದಲ್ಲಿ ತಮ್ಮನ್ನು ಒಗ್ಗೂಡಿಸಿಕೊಂಡು ಬೆಳೆದವರು. ಅವರ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ, ಅನಾರೋಗ್ಯ, ಸಾಲು ಸಾಲು ಸಾವುಗಳಾದರೂ ಧೃತಿಗೆಡದೆ ಓಲೆಗರಿ, ಹಸ್ತಪ್ರತಿಗಳಲ್ಲಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ವಿಶ್ಲೇಷಿಸಿ ಪ್ರಕಟಿಸಿದರು ಎಂದು ತಿಳಿಸಿದರು.  ಇದೇ ವೇಳೆ ವಚನ ಸಾಧಕರಾದ ಶಿವಾನಂದ ಗುರೂಜಿ, ಚಿಕ್ಕೋಳ್ ಈಶ್ವರಪ್ಪ, ಎಂ.ಕೆ. ಬಕ್ಕಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂತೋಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net