ಡಾ. ಶಾಮನೂರು ಶಿವಶಂಕರಪ್ಪ 94ನೇ ವರ್ಷಕ್ಕೆ ಪದಾರ್ಪಣೆ

dvg-shamanuru-birthday-16.jpg
Published on

ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಭಾನುವಾರ 94ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು.
 ಜನ್ಮದಿನಾಚರಣೆ ಅಂಗವಾಗಿ ಬೆಳಗ್ಗೆಯಿಂದ ಸಂಜೆಯ ವರೆಗೆ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಐಎಂಎ ಹಾಲ್‌ನಲ್ಲಿ ಎಸ್‌ಎಸ್ ಕೇರ್ ಟ್ರಸ್ಟ್‌ನಿಂದ ರಕ್ತದಾನ ಶಿಬಿರ ನಡೆಯಿತು. ಹಲವರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಕ್ರಿಕೆಟ್ ಮತ್ತು ಬಾಸ್ಕೆಟ್‌ಬಾಲ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
 ಶಾಮನೂರು ಶಿವಶಂಕರಪ್ಪ ಅವರು ಹೊಳಲ್ಕೆರೆ ತಾಲೂಕು ಹಿರೇ ಯಮ್ಮಿಗನೂರು ಗ್ರಾಮದಲ್ಲಿರುವ ಮನೆ ದೇವರು ಕಲ್ಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು.
 ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಅವರ ನಿವಾಸದಲ್ಲಿ ಸಂಭ್ರಮ ಮನೆಮಾಡಿತ್ತು. ಶಾಮನೂರು ಶಿವಶಂಕರಪ್ಪ ಅವರ ಮಕ್ಕಳಾದ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಸುಧಾ ರಾಜೇಂದ್ರ ಪಾಟೀಲ್, ಮಂಜುಳಾ ಶಿವಶಂಕರ್, ಶೈಲಜಾ ಭಟ್ಟಾಚಾರ್ಯ ಮತ್ತು ಮೀನಾ ಪಾಟೀಲ್ ಹಾಗೂ ಸೊಸೆಯಂದಿರಾದ ಪ್ರೀತಿ ಬಕ್ಕೇಶ್, ರೇಖಾ ಗಣೇಶ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಕೇಕ್ ಕತ್ತರಿಸುವ ಮೂಲಕ ಶುಭಾಶಯ ಕೋರಿದರು. ವಿದೇಶ ಪ್ರವಾಸದಲ್ಲಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ದೂರವಾಣಿ ಮೂಲಕ ಶುಭ ಹಾರೈಸಿದರು.
 ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ರೇಣುಕ ಪ್ರಸನ್ನ, ಗುರುಮೂರ್ತಿ ಸೇರಿ ಮಹಾಸಭಾದ ಅನೇಕ ಪದಾಧಿಕಾರಿಗಳು, ಸಮಾಜದವರು ಶುಭ ಕೋರಿದರು.
 ತಂಡೋಪತಂಡವಾಗಿ ಆಗಮಿಸಿದ ಸಾರ್ವಜನಿಕರು ಶಾಮನೂರು ಅವರಿಗೆ ಶುಭ ಹಾರೈಸಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್. ಬಸಪ್ಪ 94 ಕೆಜಿ ತೂಕದ ಕೇಕ್ ಮಾಡಿಸುವ ಮೂಲಕ ಅಭಿಮಾನ ತೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net