ಬಹುಶಾಸ್ತ್ರೀಯ ಅಧ್ಯಯನಕ್ಕೆ ಆದ್ಯತೆ ಅಗತ್ಯ

dvg-biet_20241025005258144.jpg
Published on

ದಾವಣಗೆರೆ : ಬಹುಶಾಸ್ತ್ರೀಯ ಅಧ್ಯಯನಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) ಮಾಜಿ ಉಪನ್ಯಾಸಕ ಡಾ. ಡಿ.ಕೆ. ಸುಬ್ರಮಣ್ಯಂ ಹೇಳಿದರು.  ನಗರದ ಬಿಐಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ, ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸೃ್ ಇಂಜಿನಿಯರ್ಸ್ ಪ್ರಥಮ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.  ಇಂಜಿನಿಯರಿಂಗ್ ವಲಯ ಯಾವುದೇ ಗಡಿ ಹೊಂದಿಲ್ಲ. ಕೃತಕವಾಗಿ ವಿವಿಧ ವಿಭಾಗಗಳಿಗೆ ಗಡಿಗಳನ್ನು ರೂಪಿಸಲಾಗಿದೆ. ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಇತ್ಯಾದಿ ವಿಭಾಗಗಳು ಸಂಪೂರ್ಣ ಸ್ವತಂತ್ರವಾಗಿಲ್ಲ. ಅವುಗಳು ಪರಸ್ಪರ ಅವಲಂಬಿತವಾಗಿವೆ ಎಂದು ತಿಳಿಸಿದರು.  ಈಗಂತೂ ಕಂಪ್ಯೂಟರ್ ವಲಯವೊಂದನ್ನೇ ಹಲವು ವಿಭಾಗ ಮಾಡಲಾಗಿದೆ. ಆದರೆ, ಯಾವುದೇ ಆವಿಷ್ಕಾರಕ್ಕೆ ಹಲವು ವಲಯಗಳ ಜ್ಞಾನ ಅಗತ್ಯವಾಗಿದೆ ಎಂದು ತಿಳಿಸಿದರು.  ಸಾಧಾರಣ ಫ್ಯಾನ್ ಒಂದನ್ನು ರೂಪಿಸುವಲ್ಲಿ ಇಂಜಿನಿಯರಿಂಗ್ ವಲಯದ ನಾಲ್ಕು ವಿಭಾಗಗಳು ಭಾಗಿಯಾಗಿರುತ್ತವೆ. ಹೀಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ವಲಯಗಳನ್ನು ಮೀರಿ ಯೋಚಿಸಬೇಕಿದೆ ಎಂದು ಹೇಳಿದರು.  ಶಿಕ್ಷಣವು ಈಗ ಜ್ಞಾನದಿಂದ ಆವಿಷ್ಕಾರದ ಕಡೆ ಸಾಗುತ್ತಿದೆ. ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳೂ ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.  ಮಣಿಪಾಲದ ಡಿ.ಒ.ಟಿ. ನೆಟ್ ಸಂಶೋಧನೆ ಹಾಗೂ ತರಬೇತಿ ವಿಭಾಗದ ನಿರ್ದೇಶಕ ಡಾ. ಯು.ಜಿ. ನಿರಂಜನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ವಿಭಾಗಗಳನ್ನು ಜತೆ ಸೇರಿಸುವುದು ಹೆಚ್ಚಾಗುತ್ತಿದೆ. ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.  ಬೆಂಗಳೂರಿನ ಕಸ್ಟಮ್ ಫಿಟ್ ಎ.ಐ. ಸಹಸ್ಥಾಪಕ ಹಾಗೂ ಸಿಇಒ ಬಿ.ವಿ. ಅಶ್ವಿನ್ ಕುಮಾರ್, ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಜತೆಗೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳೂ ಆಗಬೇಕಿದೆ. ನವೋದ್ಯಮಗಳನ್ನು ಸ್ಥಾಪಿಸಲು ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.  ಮಲೇಷಿಯಾದ ಟೆಕ್ನಾಲಜಿ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಪವರ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಉಪನ್ಯಾಸಕ ಡಾ. ಚೀ ವಿ ತಾನ್, ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್, ಡಾ. ಬಿ. ಪೂರ್ಣಿಮಾ, ಡಾ. ಎಚ್.ಪಿ. ವಿನುತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net