

ದಾವಣಗೆರೆ : ಸ್ವಾಯತ್ತ (ಅಟಾನಮಸ್) ಇಂಜಿನಿಯರಿಂಗ್ ಕಾಲೇಜುಗಳ ಪ್ರಶ್ನೆಪತ್ರಿಕೆಗಳ ಗುಣಮಟ್ಟದ ಮೇಲೆ ಕಣ್ಣಿಡಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ವಿವಿಯ ಕುಲಪತಿ ಡಾ. ಎಸ್. ವಿದ್ಯಾಶಂಕರ ಹೇಳಿದರು. ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ, ಸ್ವಾಯತ್ತ ಸಂಸ್ಥೆಯಾಗಿ ಬಿಐಇಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೀಕ್ಷೆ ಮುಗಿದ ನಂತರ ಸ್ವಾಯತ್ತ ಸಂಸ್ಥೆಗಳ ಪ್ರಶ್ನೆಪತ್ರಿಕೆಗಳನ್ನು ಸಮಿತಿಯು ಪರಿಶೀಲಿಸಲಿದೆ. ಅದರಲ್ಲಿ ಕಳಪೆ ಎಂದೆನಿಸಿದರೆ ಸುಧಾರಣೆ ತರುವಂತೆ ಸಂಬಂಧಿಸಿದ ಕಾಲೇಜುಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು. ಸ್ವಾಯತ್ತ ಸಂಸ್ಥೆಗಳಲ್ಲಿ ಉತ್ತೀರ್ಣರಾಗುವುದು ಸುಲಭ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿದೆ. ಕೆಲವು ಅಟಾನಮಸ್ ಸಂಸ್ಥೆಗಳಲ್ಲಿ ಪಠ್ಯಕ್ರಮದ ಗುಣಮಟ್ಟ ಕಳಪೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆ ರೀತಿ ಆಗಬಾರದು ಎಂದು ಹೇಳಿದರು. ಇದೇ ಮನಸ್ಥಿತಿಯಲ್ಲಿ ವಿದ್ಯಾರ್ಥಿಗಳು ಓದು ಮುಂದುವರಿಸಿದರೆ ಪದವಿ ಮುಗಿದ ನಂತರ ಉದ್ಯೋಗ ಪಡೆಯುವುದು ಕಠಿಣವಾಗಲಿದೆ. ಐ.ಐ.ಟಿ.ಯಂಥ ಉನ್ನತ ಸಂಸ್ಥೆಗಳಲ್ಲಿ ಓದಿದರೂ ಶೇ. 50 ರಷ್ಟು ಪದವೀಧರರಿಗೆ ಉದ್ಯೋಗ ದೊರಕಿಲ್ಲ. ಆದ್ದರಿಂದ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು ಎಂದು ಸೂಚಿಸಿದರು. ವಿಟಿಯುನ ಪಠ್ಯಕ್ರಮ ದೇಶದ ಇತರೆ ವಿವಿಗಳಿಗಿಂತ ಉತ್ತಮವಾಗಿದೆ ಎಂದು ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಚಾಯ್ಸ ಆಧಾರಿತ ಕ್ರೆಡಿಟ್ ವ್ಯವಸ್ಥೆ, ಕೇವಲ 3 ಗಂಟೆಗಳಲ್ಲಿ ಫಲಿತಾಂಶ ಪ್ರಕಟಣೆ, ಜುಲೈ ತಿಂಗಳಲ್ಲಿ ಮತ್ತೊಂದು ಘಟಿಕೋತ್ಸವ ಹೀಗೆ ‘ವಿದ್ಯಾರ್ಥಿ ಕೇಂದ್ರಿತ’ ವಿಶ್ವವಿದ್ಯಾಲಯವಾಗಿ ರೂಪುಗೊಂಡಿದೆ ಎಂದು ವಿವರಿಸಿದರು. ಉದ್ಯಮ ವಲಯದ ನಿರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸಲು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದೊಂದಿಗೆ ವಿವಿ ಒಡಂಬಡಿಕೆ ಮಾಡಿಕೊಂಡಿದೆ. ಅಂತಾರಾಷ್ಟ್ರೀಯ ಇಂಟರ್ನ್‌ಷಿಪ್‌ಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ವಿಟಿಯು ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ, ಬಿಐಇಟಿ ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ, ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಇದ್ದರು. ಕಂಪ್ಯೂಟರ್ ಸೈನ್ಸ್ (ಬಿಜಿನೆಸ್ ಸಿಸ್ಟಂ) ವಿಭಾಗದ ಮುಖ್ಯಸ್ಥೆ ವಿನುತಾ ಸ್ವಾಗತಿಸಿದರು. ಶಾಲಿನಿ ನೃತ್ಯ ಪ್ರದರ್ಶನ ನೀಡಿದರು.