ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ

dvg-Ambedkar-bhavana.jpg
Published on

ದಾವಣಗೆರೆ :  ಬೆಂಗಳೂರಿನಲ್ಲಿ ಇರುವುದಕ್ಕಿಂತ ಸುಸಜ್ಜಿತವಾದ ಅಂಬೇಡ್ಕರ್ ಭವನ ದಾವಣಗೆರೆಯಲ್ಲಿ ನಿರ್ಮಾಣವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.  ಜಿಲ್ಲಾಡಳಿತ, ಜಿ.ಪಂ, ಸಮಾಜಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಿಟ್ ಹೌಸ್ ಪಕ್ಕದಲ್ಲಿ ಸೋಮವಾರ, ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.  ಭವನ ನಿರ್ಮಿಸಲು ಹಣದ ಕೊರತೆ ಇಲ್ಲ. 15 ರಿಂದ 20 ಕೋಟಿ ರೂ.ಗಳಾದರೂ ತೊಂದರೆ ಇಲ್ಲ. ಕಟ್ಟಡದ ವಿನ್ಯಾಸ ಉತ್ತಮವಾಗಿರಬೇಕು. ಒಳ್ಳೆಯ ಗುತ್ತಿಗೆದಾರರಿಗೆ ನೀಡಿ ಶೀಘ್ರವೇ ಕಾಮಗಾರಿ ಆರಂಭಿಸಬೇಕು. ಹೆಚ್ಚು ಕಾರ್ಯಕ್ರಮಗಳು ನಡೆದು ಜನರಿಗೆ ಅನುಕೂಲವಾಗಬೇಕು ಎಂದರು.  ಈ ಭವನ 2 ಸಾವಿರ ಇಸವಿಯಲ್ಲೇ ಆರಂಭವಾಗಬೇಕಿತ್ತು. ಎಲ್ಲಿ ನಿರ್ಮಿಸಬೇಕು ಎಂಬ ಗೊಂದಲದಲ್ಲೇ ಕಾಲ ವಿಳಂಬವಾಯಿತು. ಈಗ ಒಳ್ಳೆಯ ಜಾಗ ಸಿಕ್ಕಿದೆ. ಇದು ಡಿಸಿಸಿ ಬ್ಯಾಂಕ್‌ಗೆ ಮಂಜೂರಾಗಿತ್ತು. ಅವರಿಗೆ ಎಪಿಎಂಸಿ ಬಳಿ ಒಳ್ಳೆಯ ಜಾಗ ನೀಡಲಾಗಿದೆ ಎಂದು ತಿಳಿಸಿದರು.  ತಾವು ಸಚಿವರಾದಾಗಿನಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಹಾಸ್ಟೆಲ್ ಸೌಲಭ್ಯ ಕಲ್ಪಿಸುವುದಕ್ಕೆ ಆದ್ಯತೆ ನೀಡಿದ್ದಾಗಿ ತಿಳಿಸಿದರು.  ದಾವಣಗೆರೆಯಲ್ಲಿ 200 ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗಿದೆ. ಇನ್ನೂ 30 ಜನರ ಕೆಲಸ ಕಾಯಂ ಮಾಡಬೇಕಿದೆ. ಅದನ್ನೂ ಬೇಗ ಆಗುವ ರೀತಿಯಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.  ಎಚ್. ಆಂಜನೇಯ ಸಮಾಜಕಲ್ಯಾಣ ಸಚಿವರಿದ್ದಾಗ ಜಿಲ್ಲೆಗೆ ಅನೇಕ ಹಾಸ್ಟೆಲ್, ಸಮುದಾಯ ಭವನ, ಮುರಾರ್ಜಿ ವಸತಿ ಶಾಲೆ ಮುಂತಾದ ಯೋಜನೆಗಳನ್ನು ಮಂಜೂರು ಮಾಡಿದರು. ಅವುಗಳಲ್ಲಿ ಕೆಲವು ಕಾಮಗಾರಿಗಳ ಕೆಲಸ ಸ್ವಲ್ಪ ಬಾಕಿ ಇದೆ.  ಈ ಬಗ್ಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಗಮನಕ್ಕೂ ತಂದಿದ್ದು, ಆ ಕಟ್ಟಡಗಳಿಗೆ ಸುಣ್ಣ, ಬಣ್ಣ ಇತ್ಯಾದಿ ಕೆಲಸಗಳನ್ನು ಮಾಡಿಸಿಕೊಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.  ಜಿಲ್ಲಾ ಪಂಚಾಯಿತಿ ಸಿಇಒ ಡಾ.ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತೆ ರೇಣುಕಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್, ಮುಖಂಡರಾದ ಸೋಮಲಾಪುರ ಹನುಮಂತಪ್ಪ, ಎನ್. ನೀಲಗಿರಿಯಪ್ಪ, ಮಲ್ಲೇಶ್, ಕುಂದುವಾಡ ಮಂಜುನಾಥ್, ಎಸ್. ಮಲ್ಲಿಕಾರ್ಜುನ್, ಎಚ್.ಜಿ. ಉಮೇಶ್, ಹೆಗ್ಗೆರೆ ರಂಗಪ್ಪ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಚ್. ಟಾಟಾ ಶಿವನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net