

ದಾವಣಗೆರೆ : ನಗರದ ಮಧ್ಯಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ ಆಗ್ರಹಿಸಿ ಬರುವ ಅ.2ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅಂಬೇಡ್ಕರ್ ಭವನ ನಿರ್ಮಾಣ ಸಂಚಾಲನಾ ಸಮಿತಿಯ ಪ್ರೊ.ಎ.ಬಿ. ರಾಮಚಂದ್ರಪ್ಪ ತಿಳಿಸಿದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಜಾಗದ ತಕರಾರಿನಿಂದ ಮುಂದೂಡಿರುವುದು ಸರಿಯಲ್ಲ. ಇದು ಅಪಮಾನದ ಸಂಗತಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಭವನವು ಬೃಹತ್ ಸಮುದಾಯ ಭವನವಾಗಿರದೇ ಅದೊಂದು ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿ ರೂಪುಗೊಳ್ಳಬೇಕು. ಗ್ರಂಥಾಲಯ ನಿರ್ಮಾಣವಾಗಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ ಎಂದು ಹೇಳಿದರು.
ನಗರದಲ್ಲಿ ಯಡಿಯೂರಪ್ಪ ಸರ್ಕಾರದ 2ನೇ ವರ್ಷದ ಸಾಧನಾ ಸಮಾವೇಶ ಸಂದರ್ಭದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದಾಗ ಅಂಬೇಡ್ಕರ್ ಭವನ ನಿರ್ಮಿಸುವ ಭರವಸೆ ನೀಡಿದ್ದರು. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಈಚೆಗೆ ದಾವಣಗೆರೆಗೆ ಭೇಟಿ ನೀಡಿದಾಗ ಭವನದ ವಿಷಯ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಚ್. ಅಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಎಸ್. ಎಸ್.ಮಲ್ಲಿಕಾರ್ಜುನ್ ಅವರು ಜಿಲ್ಲಾ ಸಚಿವರಾಗಿದ್ದರು. ಆಗ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಪ್ರಯತ್ನನಡೆದಿದ್ದವು. ಭವನದ ನೀಲನಕ್ಷೆ ಹಾಗೂ ಅಂದಾಜು ವೆಚ್ಚ ತಯಾರಿಸಿ ಸೂಕ್ತ ಸ್ಥಳದಲ್ಲಿ ಭವನ ನಿರ್ಮಿಸುವ ಘೋಷಣೆ ಮಾಡಿದ್ದರು. ಕಾಣದ ಕೈಗಳ ಕೈವಾಡದಿಂದ ಆ ಭರವಸೆ ಹುಸಿಯಾಗಿದೆ ಎಂದರು.
ಮುಖಂಡ ಎಚ್.ಮಲ್ಲೇಶ್ ಮಾತನಾಡಿ, ನಗರದ ಅಗ್ನಿಶಾಮಕ ದಳದ ಕಚೇರಿ ಪಕ್ಕದ ಜಾಗ, ರೈಲ್ವೇ ನಿಲ್ದಾಣದ ಬಳಿ ಇರುವ ಪಿಡಬ್ಲ್ಯುಡಿ ಇಲಾಖೆಯ ವಸತಿ ಗೃಹ, ತೋಟಗಾರಿಕೆ ಇಲಾಖೆಯ ಜಾಗ, ನಗರಪಾಲಿಕೆ ಹಿಂಭಾಗದ ಜಾಗ, ಪ್ರವಾಸಿ ಮಂದಿರದ ಸ್ಥಳಗಳಲ್ಲಿ ಒಂದುಕಡೆ ಅಂಬೇಡ್ಕರ್ ಭವನ ನಿರ್ಮಿಸಬೇಕು. ಇಲ್ಲವೇ ಬಾಡ ಕ್ರಾಸ್‌ನಿಂದ ಶಾಮನೂರುವರೆಗಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೂಕ್ತ ಜಾಗ ಖರೀದಿಸಿ ಭವನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಜಿಲ್ಲಾ ಸಚಿವರು ಅಂಬೇಡ್ಕರ್ ಭವನ ನಿರ್ಮಾಣ ವಿಷಯದಲ್ಲಿ ಕಾಳಜಿ ವಹಿಸಬೇಕು. ಸೂಕ್ತ ಜಾಗ ಸೂಚಿಸುವ ಮೂಲಕ ಭವನ ನಿರ್ಮಾಣ ಮಾಡಬೇಕು ಹಾಗೂ ಅವರೇ ಭವನ ಉದ್ಘಾಟಿಸುವಂತಾಗಲಿ ಎಂದು ಆಶಿಸಿದರು.
ಕುಂದವಾಡ ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿ.ಎಂ.ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ಬಿ.ಎಸ್. ನಾಗೇಶ್, ಅನಿಸ್ ಪಾಷ, ಸೋಮಲಾಪುರದ ಹನುಮಂತಪ್ಪ, ಸಿ.ಬಸವರಾಜ್, ರೇಣುಕಾ ಯಲ್ಲಮ್ಮ, ಎಸ್.ಶೇಖರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.