ಡ್ರೋನ್‌ನಿಂದ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆ

Published on

ದಾವಣಗೆರೆ : ಡ್ರೋನ್ ಮೂಲಕ ಬೆಳೆಗಳಿಗೆ ಯೂರಿಯಾ ಸಿಂಪಡಣೆಯಿಂದ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಲಿದೆ ಎಂದು ಸಂಸದ ಡಾ. ಜಿ.ಎಂ.ಸಿದ್ದೇಶ್ವರ ಹೇಳಿದರು.
 ತಾಲೂಕಿನ ನೇರ್ಲಿಗೆ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ದೇಶದಲ್ಲಿ 15 ಸಾವಿರ ಡ್ರೋನ್‌ಗಳನ್ನು ಶೇ 80ರಷ್ಟು ಸಹಾಯಧನದೊಂದಿಗೆ ಮಹಿಳಾ ಸಂಘಗಳಿಗೆ ನೀಡಲಾಗುತ್ತಿದೆ. ನಮೋ ಡ್ರೋನ್ ದೀದಿ ಎಂದು ಯೋಜನೆಗೆ ಹೆಸರಿಡಲಾಗಿದೆ ಎಂದು ತಿಳಿಸಿದರು.
 ಕೇಂದ್ರ ಸರ್ಕಾರದ ಹಲವು ಯೋಜನೆಗಳು ನೈಜ ಫಲಾನುಭವಿಗಳಿಗೆ ದೊರೆತಿವೆ. ದೇಶದ 13 ಕೋಟಿಗೂ ಅಧಿಕ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ ಎಂದರು.
 ವಿಶ್ವಕರ್ಮ ಸೇರಿದಂತೆ ಸುಮಾರು 70 ಯೋಜನೆಗಳನ್ನು ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಯೋಜನೆಗಳ ಸದುಪಯೋಗ ಪಡೆದು ಆರ್ಥಿಕ ಸಬಲರಾಗಬೇಕು. ಯೋಜನೆಯಿಂದ ಹೊರಗಿರುವ ಜನರನ್ನು ಯೋಜನಾ ವ್ಯಾಪ್ತಿಗೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯವರು ಗೆದ್ದು ಪ್ರಧಾನಿಯಾದರೆ ಈ ದೇಶದ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದು ಹೇಳಿದರು.
 ಕೃಷಿ ಬಳಕೆಯ ಡ್ರೋನ್ ಪ್ರಾತ್ಯಕ್ಷಿಕೆ ವೀಕ್ಷಿಸಿದ ಸಂಸದರು ಎನ್‌ಆರ್‌ಎಂಎಲ್ ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದರು.
 ನೇರ್ಲಿಗೆ ಗ್ರಾಪಂ ಅಧ್ಯಕ್ಷೆ ರಶ್ಮಿ ರೇಖಾ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ದೇವರಾಜ್, ನಬಾರ್ಡ್ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net