

ದಾವಣಗೆರೆ : ಭಗೀರಥ ಮಹರ್ಷಿ ಘೋರ ತಪಸ್ಸಿನ ಮೂಲಕ ಕಠಿಣ ಕಾರ್ಯ ಪೂರೈಸಿ ಪವಿತ್ರ ಗಂಗೆಯನ್ನು ಭೂಮಿಗೆ ತಂದ ಛಲಗಾರ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಪ್ಪಾರ ಸಮಾಜದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗೀರಥ ಮಹರ್ಷಿ ನಿರ್ಣಯ, ಭಕ್ತಿ ಹಾಗೂ ಅಸಾಧ್ಯವಾದುದನ್ನು ಕಠಿಣ ಪ್ರಯತ್ನದ ಮೂಲಕ ಸಾಧ್ಯ ಮಾಡುವುದನ್ನು ತೋರಿಸಿಕೊಟ್ಟವರು. ಪವಿತ್ರ ಗಂಗೆಯನ್ನು ಭೂಮಿಗೆ ತಂದು ತನ್ನ ಹಿರಿಯರಿಗೆ ಜಲತರ್ಪಣ ಮಾಡಿದ ಭಗೀರಥನ ಸಾಧನೆ ಅಸಾಮಾನ್ಯ. ಪರಿಶ್ರಮ ಮತ್ತು ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದೆಂಬ ಮುನ್ನುಡಿ ಬರೆದವರು ಭಗೀರಥ ಮಹಿರ್ಷಗಳು, ಸದಾ ಅವರ ಮಾರ್ಗದಲ್ಲಿ ನಡೆಯೋಣ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಎಂ.ಸಿ. ರಮೇಶ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಕೆ.ಬಿ. ಗಿರೀಶ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಎಚ್.ಡಿ. ಮಾರುತಿ, ರಾಜ್ಯ ಭಗೀರಥ ನೌಕರರ ಸಂಘದ ಅಧ್ಯಕ್ಷ ಎನ್.ಎಸ್. ಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳ ನಾಯ್ಕ್ ಇದ್ದರು.