ಕುಂದೂರಿನಲ್ಲೇ ರೈತರ ಬೃಹತ್ ಸಮಾವೇಶ

IMG-20250809-WA0056.jpg
Published on

ದಾವಣಗೆರೆ  : ನೆರೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಭದ್ರಾ ಬಲದಂಡೆ ನಾಲೆಯನ್ನು ಸೀಳಿದ್ದು ನಿಜ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪುನರುಚ್ಚರಿಸಿದ್ದಾರೆ. ಅಲ್ಲದೇ ಕಾಂಗ್ರೆಸ್‌ನವರು ಸಭೆ ನಡೆಸಿದ ಹೊನ್ನಾಳಿ ತಾಲೂಕು ಕುಂದೂರಿನಲ್ಲೇ ರೈತರ ಬೃಹತ್ ಸಮಾವೇಶವನ್ನು ಜಿಲ್ಲಾ ರೈತರ ಒಕ್ಕೂಟದಿಂದ ಮಾಡಿ ಜನರಿಗೆ ಸತ್ಯಾಂಶ ತಿಳಿಸುವುದಾಗಿ ತಿರುಗೇಟು ನೀಡಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡ ಅವರ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.  ಕಾಂಗ್ರೆಸ್‌ನ ಕೆಲವು ಶಾಸಕರು ಕುಂದೂರಿನಲ್ಲಿ ಸಭೆ ಮಾಡಿ ನಮ್ಮ ಹೋರಾಟದ ಬಗ್ಗೆ ವ್ಯಂಗ್ಯವಾಡಿದ್ದಾರೆ. ನಮ್ಮನ್ನು ನಿರುದ್ಯೋಗಿಗಳು ಎಂದಿದ್ದಾರೆ. ನಮ್ಮ ಹೋರಾಟಕ್ಕೆ ಮಣಿದು ಸರ್ಕಾರ ತಡೆಗೋಡೆ ಕಟ್ಟಿದೆ. ನಾವು ನಕಲಿ ರೈತರಲ್ಲ, ಎಲ್ಲರೂ ಕೃಷಿ ಹಿನ್ನೆಲೆಯಿಂದ ಬಂದಿದ್ದೇವೆ. ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ ಎಂದರು.  ಡಿ.ಜಿ. ಶಾಂತನಗೌಡ ಅವರು ಸಿಎಂ, ಡಿಸಿಎಂ ಭೇಟಿ ಮಾಡಿಲ್ಲ. ಅವರು ಬಣ್ಣ ಹಚ್ಚದೇ ನಾಟಕ ಮಾಡುತ್ತಿದ್ದಾರೆ. ಎರಡು ತಿಂಗಳಿಂದ ಈ ವಿಷಯವಾಗಿ ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದರು.  ಹೊನ್ನಾಳಿ ಶಾಸಕರು ನಮಗೆ ಎಚ್ಚರಿಕೆ ಕೊಡುವ ಭಾಷೆಯಲ್ಲಿ ಮಾತನಾಡಿದ್ದಾರೆ. ಅವರೇನು ನಮಗೆ ಊಟ ಹಾಕಿದ್ದಾರೆಯೆ?. ಹೋರಾಟ ನಮ್ಮ ಹಕ್ಕು ಎಂದು ಹೇಳಿದರು.  ಕೇಂದ್ರ ಸರ್ಕಾರ ರಾಜ್ಯಕ್ಕೆ ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ನೀಡಿದೆ. ಕಾಳ ಸಂತೆಯಲ್ಲಿ ಮಾರಾಟ ಮಾಡಿ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ದೂರಿದರು.  ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ್, ಬಿ.ಜಿ. ಅಜಯ ಕುಮಾರ್, ಬಿ.ಎಂ. ಸತೀಶ್, ಸುಣಿಗೆರೆ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net