

ದಾವಣಗೆರೆ : ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ 30 ಕ್ಯೂಸೆಕ್ ನೀರು ಹರಿಸುವ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹಾಗೂ ಹರಿಹರ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಡಳಿತ ಭವನದ ಬಳಿ ಸೇರಿದ ಪ್ರತಿಭಟನಾಕಾರರು ಸರ್ಕಾರದ ಧೋರಣೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು. ಗುಪ್ತವಾಗಿ ಕಾಮಗಾರಿಯನ್ನು ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಹೊಸದುರ್ಗ ಮತ್ತು ತರೀಕೆರೆ ಶಾಸಕರ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದೆ. ವಾಸ್ತವವಾಗಿ ಭದ್ರಾ ನಾಲಾ ವ್ಯಾಪ್ತಿಯ ಶಾಸಕರ ಸಭೆ ಕರೆದು ಈ ಬಗ್ಗೆ ಅಭಿಪ್ರಾಯ ಕೇಳಬೇಕಿತ್ತು ಎಂದು ಪ್ರತಿಭಟನಾಕಾರರು ಹೇಳಿದರು. ಭದ್ರಾ ನಾಲಾ ವ್ಯಾಪ್ತಿಯ ಹೊನ್ನಾಳಿ, ಹರಪನಹಳ್ಳಿ, ದಾವಣಗೆರೆ, ಚನ್ನಗಿರಿ ಕೊನೇ ಭಾಗದ ರೈತರು ನೀರು ಹಾಯಿಸಿಕೊಳ್ಳಲು ಕಷ್ಟಕರವಾದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ 30 ಕ್ಯೂಸೆಕ್ ನೀರನ್ನು ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಿಗೆ ಕೊಂಡೊಯ್ಯಲು ಅನುಮತಿ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿಗೆ ನಮ್ಮ ವಿರೋಧವಿಲ್ಲ, ಆದರೆ ಭದ್ರಾ ಅಚ್ಚುಕಟ್ಟು ಪ್ರದೇಶದ ಜನರಿಗೆ ನೀರಾವರಿ ಇಲಾಖೆ ಸಮರ್ಪಕವಾಗಿ ನೀರು ಕೊಡುತ್ತಿಲ್ಲ. ಇದೀಗ 30 ಕ್ಯೂಸೆಕ್ ನೀರನ್ನು ಕೊಟ್ಟಿದ್ದೇ ಆದಲ್ಲಿ, ಕ್ರಮೇಣ ಹರಪನಹಳ್ಳಿ, ದಾವಣಗೆರೆ ಹಾಗೂ ಹರಿಹರ ತಾಲೂಕಿನ ಜಮೀನುಗಳಿಗೆ ನೀರಿಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ನದಿಯಿಂದ ನೀರು ಕೊಂಡೊಯ್ಯಲು ನಮ್ಮ ಅಭ್ಯಂತರವಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾಲೆಯಿಂದ ನೀರು ಕೊಂಡೊಯ್ಯಲು ಬಿಡುವುದಿಲ್ಲ. ಸದರಿ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಹನಗವಾಡಿ ವೀರೇಶ್, ಯಶವಂತರಾವ್ ಜಾಧವ್, ಎನ್.ಇ. ಜೀವನಮೂರ್ತಿ, ಮುಖಂಡರಾದ ಬಿ.ಎಸ್. ಜಗದೀಶ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ಎ.ವೈ. ಪ್ರಕಾಶ್, ಅಣ್ಣೇಶ್ ಕೊಮಾರನಹಳ್ಳಿ, ಶಾಂತರಾಜ್ ಪಾಟೀಲ್, ಮುರುಗೇಶ್ ಆರಾಧ್ಯ, ಶಿವನಹಳ್ಳಿ ರಮೇಶ್, ಜಿ.ಎಸ್. ಶ್ಯಾಮ್, ಭಾಗ್ಯಾ ಪಿಸಾಳೆ, ಗೌರಬಾಯಿ, ಮಂಜುಳಾ ಇಟ್ಟಿಗೆ ಇತರರು ಪಾಲ್ಗೊಂಡಿದ್ದರು.