ಭದ್ರಾ ನಾಲೆಯಿಂದ ಅನ್ಯ ಜಿಲ್ಲೆಗಳಿಗೆ ನೀರು

BP-HARISH-hrr.png
Published on

ದಾವಣಗೆರೆ : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನ 172 ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ 346 ಜನವಸತಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ಬಲದಂಡೆ ನಾಲೆಯಿಂದ 30 ಕ್ಯೂಸೆಕ್ ನೀರು ಪೂರೈಸಲು ಸರ್ಕಾರ ಮುಂದಾಗಿದೆ. ಇದು ಕಾರ್ಯಗತವಾದರೆ ಅಚ್ಚುಕಟ್ಟು ಭಾಗದ ರೈತರಿಗೆ ಅನ್ಯಾಯವಾಗಲಿದೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಡಿಯುವ ನೀರಿನ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಭದ್ರಾ ಜಲಾಶಯ ಅಥವಾ ನದಿಯಿಂದ ನೀರು ಪೂರೈಕೆ ಮಾಡಲಿ. ಬಲದಂಡೆ ನಾಲೆಯಿಂದ ಬೇಡ ಎಂದು ತಿಳಿಸಿದರು.  ಸದ್ಯದ ಸ್ಥಿತಿಯಲ್ಲೇ ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲೂಕಿನ, ಅಚ್ಚುಕಟ್ಟಿನ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. 30 ಕ್ಯೂಸೆಕ್ ನೀರನ್ನು ನಾಲೆಯಿಂದ ಪಡೆದರೆ ರೈತರ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.  ಅಚ್ಚುಕಟ್ಟಿನ ಕೊನೇ ಭಾಗದ ಪರಿಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿ ಎಂದು ಆಗ್ರಹಿಸಿದರು.  ಈ ವಿಷಯದ ಕುರಿತು ಚರ್ಚಿಸಲು ಭದ್ರಾವತಿಯಲ್ಲಿ ಸೋಮವಾರ ಸಭೆ ಕರೆದಿದ್ದಾರೆ. ಅಲ್ಲಿಗೆ ಅಚ್ಚುಕಟ್ಟು ಭಾಗದ ರೈತರು ಬರಬೇಕು. ರೈತ ಸಂಘಟನೆಗಳು ಸೇರಿ ಹೋರಾಟ ಮಾಡೋಣ ಎಂದು ಮನವಿ ಮಾಡಿದರು.  ಅಂದಿನ ಸಭೆಗೆ ಹೊಸದುರ್ಗ ಮತ್ತು ತರೀಕೆರೆ ಶಾಸಕರನ್ನು ಆಹ್ವಾನಿಸಿದ್ದಾರೆ. ಭದ್ರಾ ಅಚ್ಚುಕಟ್ಟಿನ ಎಲ್ಲ ಶಾಸಕರನ್ನೂ ಕರೆಯಬೇಕಿತ್ತು ಎಂದು ಅಭಿಪ್ರಾಯಪಟ್ಟರು.  ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ ಶಾಮನೂರು ಮಾತನಾಡಿ, ಅಚ್ಚುಕಟ್ಟಿನ 40 ಸಾವಿರ ಎಕರೆಗೆ ನೀರು ತಲುಪಿಲ್ಲ. ನಾಲೆಗಳ ಮರು ಆಧುನೀಕರಣ ಆಗಬೇಕು. ಎಡದಂಡೆ ನಾಲೆಯ ಗೇಟ್ ಹಾಳಾಗಿದೆ. ಅದರ ದುರಸ್ತಿಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.  ಭದ್ರಾ ಬಲದಂಡೆ ನಾಲೆಯಿಂದ ನೀರು ಪೂರೈಸುವ ಯೋಜನೆಗೆ ಬಿಜೆಪಿ ಸರ್ಕಾರ ಇದ್ದಾಗಲೇ ಒಪ್ಪಿಗೆ ನೀಡಲಾಗಿತ್ತು. ಇದುವರೆಗೂ ತುಂಗಾ ಜಲಾಶಯದಿಂದ ನೀರು ಎತ್ತಿ ಭದ್ರಾ ಜಲಾಶಯಕ್ಕೆ ಪೂರೈಸುವ ಕೆಲಸ ಆಗಿಲ್ಲ ಎಂದು ದೂರಿದರು.  ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ. ಗ್ರಾಮೀಣ ರಸ್ತೆಗಳು ಹಾಳಾಗಿದ್ದು ಅಭಿವೃದ್ಧಿಗೆ ಹಣ ಹೊಂದಿಸುವುದು ಸರ್ಕಾರಕ್ಕೆ ಕಷ್ಟವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಈ ಪರಿಸ್ಥಿತಿ ಬಂದೊದಗಿದೆ ಎಂದರು.  ಹರಿಹರ ನಗರಸಭೆಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇವೆ. ಕೆಳ ಹಂತದ ಸಿಬ್ಬಂದಿಯೇ ಆ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೆ, ಇನ್ನೂ ಸರಿಯಾಗಿಲ್ಲ ಎಂದು ಹೇಳಿದರು.  ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ ಹನಗವಾಡಿ, ಹರಿಹರದ ಲಿಂಗರಾಜ ಸುದ್ದಿಗೋಷ್ಠಿಯಲ್ಲಿದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net