ರಾಷ್ಟ್ರೀಯ ಹೆದ್ದಾರಿ ಬಂದ್ ತಾತ್ಕಾಲಿಕ ಮುಂದೂಡಿಕೆ

bhadra.jpg
Published on

ದಾವಣಗೆರೆ : ಭದ್ರಾ ಜಲಾಶಯದ ರಕ್ಷಣೆ ಹಾಗೂ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ಅಚ್ಚುಕಟ್ಟು ಭಾಗದ ರೈತರು ಬುಧವಾರ ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಹೆದ್ದಾರಿ ಬಂದ್ ಅನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.  ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯ ನಂತರ ರೈತ ಮುಖಂಡರು ಈ ನಿರ್ಧಾರ ಪ್ರಕಟಿಸಿದರು.  ಜಲಾಶಯದ ರಿವರ್ ಸ್ಲೀವ್‌ನಲ್ಲಿ ಆಗಿದ್ದ ಸಮಸ್ಯೆಯಿಂದಾಗಿ ನೀರು ಪೋಲಾಗಿದ್ದು, ದುರಸ್ತಿಗೆ 100 ಕೋಟಿ ರೂ. ಬಿಡುಗಡೆ, ಎಮರ್ಜೆನ್ಸಿ ಗೇಟ್ ರಿಪೇರಿ, ತುಂಗಾ ಜಲಾಶಯದಿಂದ 22 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಪೂರೈಸುವ ವಿಚಾರವನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಸ್ತಾಪಿಸಿದರು. ಚನ್ನಗಿರಿಯ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಧ್ವನಿಗೂಡಿಸಿದರು.  ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ರೈತರ ಬೇಡಿಕೆಗಳ ಬಗ್ಗೆ ಉಸ್ತುವಾರಿ ಸಚಿವರು ಮತ್ತು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಹುಡುಕುವುದಾಗಿ ತಿಳಿಸಿದರು.  ಭದ್ರಾ ಯೋಜನೆಯ ಅಧೀಕ್ಷಕ ಇಂಜಿನಿಯರ್ ಸುಜಾತಾ ಮಾತನಾಡಿ, ಏಪ್ರಿಲ್‌ನಿಂದಲೇ ರಿವರ್ ಸ್ಲೀವ್‌ನ ನಿರ್ವಹಣೆ ಆರಂಭಿಸಲಾಯಿತು. ದುರಸ್ತಿಗಾಗಿ ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ. ಎಮರ್ಜೆನ್ಸಿ ಗೇಟ್ ದುರಸ್ತಿಗೆ 7.5 ಕೋಟಿ ರೂ.ಗಳ ಹಣಕಾಸು ಟೆಂಡರ್ ಆಗಬೇಕಿದೆ ಎಂದು ಹೇಳಿದರು.  ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಮಾತನಾಡಿ, ಮೊದಲು ನೀರು ಕೊಡಿ, ನಂತರ ಹಂತ ಹಂತವಾಗಿ ದುರಸ್ತಿಗೆ ಕ್ರಮ ತೆಗೆದುಕೊಳ್ಳಿ. ರೈತರು ಭತ್ತ ನಾಟಿ ಮಾಡಲು ಅನುಕೂಲವಾಗುವಂತೆ ನಾಲೆಗೆ ನೀರು ಹರಿಸಬೇಕು ಎಂದು ಹೇಳಿದರು.  ರೈತ ಮುಖಂಡ ಎಚ್.ಆರ್. ಲಿಂಗರಾಜ್ ಮಾತನಾಡಿ ಅಚ್ಚುಕಟ್ಟಿನ ಕೊನೇ ಭಾಗಕ್ಕೆ ನೀರು ತಲುಪುತ್ತಿಲ್ಲ. ನಾಲೆಗಳನ್ನು ಸುಸ್ಥಿತಿಯಲ್ಲಿಡಬೇಕು. ರಿವರ್ ಸ್ಲೀವ್ ಅನ್ನು ಪ್ರತಿ ವರ್ಷ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.  ಎರಡು ದಿನಗಳಲ್ಲಿ ನಾಲೆಗೆ ನೀರು ಬಿಡಲು ಕ್ರಮ ಕೈಗೊಳ್ಳುವಂತೆ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು. ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಕೊಳೇನಹಳ್ಳಿ ಸತೀಶ್, ಹುಚ್ಚವ್ವನಹಳ್ಳಿ ಮಂಜುನಾಥ್, ಲೋಕಿಕೆರೆ ನಾಗರಾಜ್, ಹನುಮಂತಪ್ಪ ಮಾತನಾಡಿದರು.  ಸಭೆಯಲ್ಲಿ ಕೇಳಿಬಂದ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದರು.  ಬೆಂಗಳೂರಿನಲ್ಲಿ ನಾಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ಕರೆದಿದ್ದಾರೆ. ನೀರಾವರಿ ಸಚಿವರೊಂದಿಗೆ ಚರ್ಚಿಸಿ ನಾಲೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನಿಸುವುದಾಗಿ ಸಚಿವರು ಭರವಸೆ ನೀಡಿದರು.  ಎಸ್‌ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಎಎಸ್‌ಪಿ ವಿಜಯಕುಮಾರ್ ಎಂ. ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net