

ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತಸಂಘದಿಂದ ಪ್ರತಿಭಟನೆ
ಆನಗೋಡು ಬೆಸ್ಕಾಂ ಕಚೇರಿಗೆ ಬೀಗ
ವಿಜಯವಾಣಿ ಸುದ್ದಿಜಾಲ ದಾವಣಗೆರೆ
ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಾಲೂಕಿನ ಆನಗೋಡು ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ರೈತರಿಗೆ ಬಹಳ ತೊಂದರೆ ಆಗುತ್ತಿದೆ. ರಾತ್ರಿವೇಳೆ ವಿಷಜಂತು, ಕರಡಿ, ಚಿರತೆ ಹಾಗೂ ಹಂದಿಗಳ ಕಾಟದಿಂದ ರೈತರು ಮೃತಪಟ್ಟ ಘಟನೆಗಳು ನಡೆದಿವೆ ಎಂದು ಸಂಘದ ಕಾರ್ಯಕರ್ತರು ದೂರಿದರು.
ರೈತರಿಗೆ ಹಗಲುವೇಳೆ ಸತತ 8 ತಾಸು ವಿದ್ಯುತ್ ಪೂರೈಕೆ ಮಾಡಬೇಕು, ರಾತ್ರಿವೇಳೆ ವಿದ್ಯುತ್ ಕಡಿತದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ಸರ್ಕಾರ ನಿರಂತರ ವಿದ್ಯುತ್ ಪೂರೈಸುವಂತೆ ಆದೇಶ ಹೊರಡಿಸಿದ್ದರೂ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದರು.
2014-15 ರಲ್ಲಿ ಅಕ್ರಮ ಸಕ್ರಮ ಕಟ್ಟಿರುವ ರೈತರಿಗೆ ಟಿಸಿ ಒದಗಿಸಬೇಕು, ವಿದ್ಯುತ್ ಲೈನ್ ಮೇಲಿನ ಮರದ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಗುಮ್ಮನೂರು ಬಸವರಾಜ್, ನೀರ್ಥಡಿ ತಿಪ್ಪೇಶ, ಕೆಂಚಮ್ಮನಹಳ್ಳಿ ಹನುಮಂತಪ್ಪ, ಕೋಲ್ಕುಂಟೆ ಉಚ್ಚೆಂಗಪ್ಪ, ಕುರ್ಕಿ ಹನುಮಂತಪ್ಪ, ಹುಚ್ಚವ್ವನಹಳ್ಳಿ ಸಿದ್ದಣ್ಣ ಇತರರು ಪ್ರತಿಭಟನೆಯಲ್ಲಿದ್ದರು.