

ದಾವಣಗೆರೆ : ನಗರದ ಕಾಯಿಪೇಟೆ, ದೊಡ್ಡಪೇಟೆ ಹಾಗೂ ಬಸವರಾಜಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನಗಳು ಹಾಗೂ ವಿರಕ್ತಮಠದಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಬಸವ ಜಯಂತಿ ಪ್ರಯುಕ್ತ ಎಲ್ಲ ದೇಗುಲಗಳನ್ನು ತಳಿರು-ತೋರಣ ಹಾಗೂ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆಯಿಂದಲೇ ಕುಟುಂಬ ಸಮೇತ ದೇವಾಲಯಗಳಿಗೆ ಆಗಮಿಸಿದ ಭಕ್ತರು ಹಣ್ಣು-ಕಾಯಿ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಕಾಯಿಪೇಟೆ ಹಾಗೂ ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನಗಳಲ್ಲಿ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಮಹಿಳೆಯರಿಂದ ತೊಟ್ಟಿಲು ಪೂಜೆ ನಡೆಯಿತು. ಬಸವರಾಜಪೇಟೆ ದೇವಾಲಯದಲ್ಲಿ ಪ್ರಾತಃಕಾಲ ರುದ್ರಾಭಿಷೇಕ ನೆರವೇರಿತು.
ಅಲ್ಲದೇ ಮೂರು ದೇಗುಲಗಳಲ್ಲೂ ಸಂಜೆ ವಿದ್ಯುತ್ ದೀಪಾಲಂಕೃತ ಹೂವಿನ ಮಂಟಪದಲ್ಲಿ ಶ್ರೀ ಬಸವೇಶ್ವರ ಪುತ್ಥಳಿಯ ಭವ್ಯ ಮೆರವಣಿಗೆ ನಡೆಯಿತು. ಮಂಗಳವಾದ್ಯ ಮತ್ತು ಜಾನಪದ ಕಲಾ ಮೇಳಗಳು ಮೆರವಣಿಗೆಗೆ ಮೆರುಗು ನೀಡಿದವು.
ಬಸವರಾಜಪೇಟೆ ದೇವಾಲಯದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಚಾಲನೆ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ ಬಿರಾದಾರ, ಪ್ರಧಾನ ಕಾರ್ಯದರ್ಶಿ ಎಂ. ದೊಡ್ಡಪ್ಪ, ಪ್ರಭು ಕಲ್ಬುರ್ಗಿ ಇತರರು ಇದ್ದರು.
ಕಾಯಿಪೇಟೆ ಹಾಗೂ ದೊಡ್ಡಪೇಟೆ ದೇವಸ್ಥಾನ ಸೇವಾ ಸಂಘಗಳಿಂದ ಶನಿವಾರ ದಾಸೋಹ ಹಮ್ಮಿಕೊಳ್ಳಲಾಗಿದೆ.
ವಿರಕ್ತಮಠದಲ್ಲಿ ಬಸವ ಜಯಂತಿ ವೈಭವ: ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ವಿರಕ್ತಮಠದಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಗಿತ್ತು. ಶುಕ್ರವಾರವೂ ಬಸವಪ್ರಭು ಶ್ರೀಗಳ ನೇತೃತ್ವದಲ್ಲಿ 112ನೇ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಥಮ ಬಾರಿಗೆ ಶ್ರಿ ಬಸವಣ್ಣನವರ ಜಯಂತಿ ಆಚರಣೆಗೆ ತಂದ ಶ್ರೀ ಮೃತ್ಯುಂಜಯ ಅಪ್ಪ, ಹರ್ಡೇಕರ್ ಮಂಜಪ್ಪ ಅವರನ್ನು ಸ್ಮರಿಸಲಾಯಿತು. ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ವಿರಕ್ತಮಠ ಹಾಗೂ ಲಿಂಗಾಯತ ತರುಣ ಸಂಘದೊಂದಿಗೆ ಬೆಳಗ್ಗೆ ಶ್ರೀ ಬಸವಣ್ಣನವರ ಮೂರ್ತಿಯ ಉತ್ಸವ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ನಂತರ ವಿರಕ್ತಮಠದಲ್ಲಿ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ನವಜಾತ ಶಿಶುಗಳಿಗೆ ಬಸವ, ಬಸವರಾಜ, ಚನ್ನಬಸವ, ಅಕ್ಕಮಹಾದೇವಿ, ವಚನ, ಜಯದೇವ, ಮೃತ್ಯುಂಜಯ, ದಾನೇಶ್ವರಿ, ಸತ್ಯಕ್ಕ, ಅಲ್ಲಮ ಪ್ರಭು, ಶಿವಯೋಗಿ, ನೀಲಾಂಬಿಕೆ, ಗಂಗಾಂಬಿಕೆ, ಅಕ್ಕನಾಗಮ್ಮ, ಪ್ರಭುದೇವ ಹೀಗೆ ಶರಣರ ಹೆಸರನ್ನು ನಾಮಕರಣ ಮಾಡಲಾಯಿತು.
ಭಕ್ತರಿಗೆ ಪ್ರಸಾದ ಸೇವೆ ನಡೆಯಿತು.