

ದಾವಣಗೆರೆ : ಕೇಂದ್ರ ಸರ್ಕಾರ ಜನಗಣತಿಯ ಜತೆಗೆ ಜಾತಿಗಣತಿಯನ್ನೂ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ವೀರಶೈವ ಲಿಂಗಾಯತ ಸಮಾಜವು ಒಳಪಂಗಡ ಭೇದ ಮರೆತು ಒಗ್ಗಟ್ಟನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಜಾತಿ ಕಾಲಂನಲ್ಲಿ ಒಂದೇ ಹೆಸರು ಬರೆಸಬೇಕು ಎನ್ನುವ ಆಶಯ ನಗರದಲ್ಲಿ ಗುರುವಾರ ನಡೆದ ಬಸವ ಜಯಂತಿ ಮತ್ತು ಅಭಿನಂದನಾ ಸಮಾರಂಭದಲ್ಲಿ ವ್ಯಕ್ತವಾಯಿತು. ಬಸವ ಜಯಂತಿ ಉತ್ಸವ ಸಮಿತಿಯಿಂದ ಇಲ್ಲಿನ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಜಾತಿಗಣತಿ ಸನ್ನಿಹಿತವಾಗಿರುವ ಹೊತ್ತಿನಲ್ಲಿ ಸಮಾಜದ ಸಂಘಟನೆ ಮತ್ತು ಒಗ್ಗಟ್ಟಿನ ಅಗತ್ಯವನ್ನು ಪ್ರತಿಪಾದಿಸಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ ಅವರು ತಮ್ಮ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದರು. ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಧ್ವನಿ ಎತ್ತಿದ್ದರಿಂದ ಸರ್ಕಾರ ಅದರ ಜಾರಿಯನ್ನು ಮುಂದೂಡುತ್ತ ಬಂದಿತು ಎಂದು ತಿಳಿಸಿದರು. ಈಗ ಕೇಂದ್ರವೂ ಜಾತಿಗಣತಿಯ ನಿರ್ಧಾರ ಮಾಡಿರುವುದರಿಂದ ಸಮಾಜದ 108 ಒಳಪಂಗಡಗಳೂ ಸೇರಿ ಜಾತಿ ಕಾಲಂನಲ್ಲಿ ಒಂದೇ ಹೆಸರು ಬರೆಸಬೇಕು. ಏನೆಂದು ಬರೆಸಬೇಕು ಎಂಬುದು ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ಮುಂದಾಳತ್ವದಲ್ಲಿ ತೀರ್ಮಾನವಾಗಲಿ ಎಂದು ಹೇಳಿದರು. ಜಾತಿ ಕಾಲಂನಲ್ಲಿ ಏನೆಂದು ಬರೆಸಬೇಕು ಎನ್ನುವ ವಿಷಯವಾಗಿ ಮಠಾಧೀಶರಲ್ಲಿ ಭಿನ್ನಾಭಿಪ್ರಾಯ ಇರಬಹುದು. ಅದನ್ನೆಲ್ಲ ಬದಿಗಿಡಬೇಕಿದೆ. ನಾವೆಲ್ಲ ಒಳಪಂಗಡ ಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಹಾಗಾದರೆ ನಮ್ಮ ಜನಸಂಖ್ಯೆ ಶೇ. 25 ಕ್ಕಿಂತ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಮಾತನಾಡಿ, ರಾಜ್ಯ ಸರ್ಕಾರ ನಡೆಸಿದ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಜನಸಂಖ್ಯೆಯನ್ನು 75 ಲಕ್ಷ ಎಂದು ತೋರಿಸಲಾಗಿದೆ. ಸರಿಯಾಗಿ ಜಾತಿಗಣತಿ ನಡೆಸಿದರೆ ನಮ್ಮ ಸಂಖ್ಯೆ 1.5 ಕೋಟಿ ದಾಟಲಿದೆ ಎಂದರು. ರಾಜ್ಯದಲ್ಲಿ 32 ವಿಶ್ವ ವಿದ್ಯಾಲಯಗಳಿದ್ದು ಯಾವುದಾದರೂ ಒಂದು ವಿವಿಗೆ ಬಸವಣ್ಣ ಅವರ ಹೆಸರಿಡಬೇಕು. ಶಾಮನೂರು ಶಿವಶಂಕರಪ್ಪ ಅವರು ಈ ಕುರಿತು ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು.