

ದಾವಣಗೆರೆ : ವಚನ ಸಾಹಿತ್ಯದಿಂದ ನಾವು ದೂರ ಸರಿದಿದ್ದರಿಂದ ಹಳಿ ತಪ್ಪಿದ್ದೇವೆ. ಮತ್ತೆ ಅದರ ಸನಿಹಕ್ಕೆ ಹೋದರೆ ಸರಿಯಾದ ದಾರಿ ಗೋಚರಿಸುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ, ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸವ ತತ್ವವು ರಾಜ ಮಾರ್ಗವಾಗಿದ್ದು ಅದನ್ನು ಅನುಸರಿಸಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕಡಿತವಾಗಿರುವ ಸಂಪರ್ಕವನ್ನು ಜೋಡಿಸುವ ಅಗತ್ಯವಿದೆ ಎಂದು ಹೇಳಿದರು. ವೀರಶೈವರೂ ನಮ್ಮವರೇ ಆಗಿದ್ದು ಇಂದಲ್ಲ ನಾಳೆ ನಮ್ಮೊಂದಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವ ಚಿಂತನೆ ನಮ್ಮ ಹೃದಯದ ಆಳಕ್ಕೆ ಇಳಿಯಬೇಕು. ಹಿರಿಯ ಗುರುಗಳಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರು 40 ವರ್ಷ ಬಸವ ಚಿಂತನೆಯಲ್ಲಿ ತೊಡಗಿದ್ದರು, ಆದರೆ ಅವರು ಪ್ರಚಾರಕ್ಕೆ ಹೋಗಲಿಲ್ಲ ಎಂದು ತಿಳಿಸಿದರು. ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಜಾತಿ ಗಣತಿಯ ಸಂದರ್ಭದಲ್ಲಿ ನಾವು ಎಚ್ಚರಗೊಳ್ಳಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಶಾಪವಾಗಿ ಪರಿಣಮಿಸಲಿದೆ. ಬಸವ ಧರ್ಮವನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಕೂಡಲ ಸಂಗಮ ಬಸವ ಧರ್ಮ ಪೀಠದ ಡಾ. ಗಂಗಾ ಮಾತಾಜಿ ಮಾತನಾಡಿ, ಬಸವ ಸಂಸ್ಕೃತಿ ಮತ್ತು ಸಾಹಿತ್ಯವು ಜನಮಾನಸವನ್ನು ತಲುಪಬೇಕು. ಬದುಕಿಗೆ ಮಾರ್ಗದರ್ಶಕವಾದ ವಚನ ಸಾಹಿತ್ಯದಲ್ಲಿ ಎಲ್ಲವೂ ಇದೆ. ಇದು ಇಡೀ ಮಾನವ ಜನಾಂಗಕ್ಕೆ ಬೇಕಾಗಿದೆ ಎಂದು ತಿಳಿಸಿದರು. ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, 1913 ರಲ್ಲಿ ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಸವ ಜಯಂತಿಯನ್ನು ಆರಂಭಿಸಲಾಯಿತು. ಬಸವಣ್ಣನನ್ನು ಮರೆತರೆ ಉಳಿಗಾಲವಿಲ್ಲ ಎಂದರು. ಪಾಂಡೋಮಟ್ಟಿಯ ಡಾ. ಗುರುಬಸವ ಸ್ವಾಮೀಜಿ ಮಾತನಾಡಿ, ಜಾತಿ, ಧರ್ಮದ ಕಂದಕ ಸರಿಪಡಿಸಲು ಬಸವ ಸಂಸ್ಕೃತಿ ಅಗತ್ಯವಾಗಿದೆ. ಈ ಅಭಿಯಾನ ಹೊಸ ಅಲೆ ಸೃಷ್ಟಿಸಿದೆ ಎಂದು ಹೇಳಿದರು. ಅಭಿಯಾನದ ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಸಮಾಜದ ಬಡವರು, ಕಡುಬಡವರಿಗೆ ನ್ಯಾಯ ಸಿಗಬೇಕಿದೆ. ಈ ಅಭಿಯಾನವು ಯಶಸ್ವಿಯಾಗಿದೆ. ನಾವೆಲ್ಲ ಒಂದಾಗಿ ಸಾಗೋಣ ಎಂದು ತಿಳಿಸಿದರು. ಶ್ರೀ ಬಸವಾನಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಶಿವಾನಂದ ಶ್ರೀಗಳು, ಅಥಣಿ ಚನ್ನಬಸವ ಸ್ವಾಮೀಜಿ ಬಸವದೇವರು ಇದ್ದರು. ಎಂ. ಶಿವಕುಮಾರ್ ಸ್ವಾಗತಿಸಿದರು.