ಲಿಂಗಾಯತ ಪ್ರಜಾಸತ್ತಾತ್ಮಕ ನೆಲೆಯೊಳಗೆ ಸೃಷ್ಟಿಗೊಂಡ ಧರ್ಮ

basava.jpg
Published on

ದಾವಣಗೆರೆ : ಲಿಂಗಾಯತ ಧರ್ಮ ಪ್ರಜಾಸತ್ತಾತ್ಮಕ ನೆಲೆಯೊಳಗೆ ಸೃಷ್ಟಿಗೊಂಡ ಹಾಗೂ ಸಂವಾದಾತ್ಮಕ ನೆಲೆಯೊಳಗೆ ರೂಪುಗೊಂಡ ಧರ್ಮ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.  ಇಲ್ಲಿನ ಸರಸ್ವತಿ ನಗರದ ಬಸವ ಬಳಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ‘ಲಿಂಗಾಯತ ಧರ್ಮ ಸಮಕಾಲೀನ ಅವಶ್ಯಕತೆ’ ಕುರಿತು ಮಾತನಾಡಿದರು.  ಜಗತ್ತಿನ ಎಲ್ಲ ಧರ್ಮಗಳೂ ಏಕವ್ಯಕ್ತಿ ಧ್ವನೀತ ಧರ್ಮಗಳಾಗಿವೆ. ಆದರೆ, ಲಿಂಗಾಯತ ಧರ್ಮದಂತೆ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಸಂಘಟಿತಗೊಂಡ ಸಂವಾದಾತ್ಮಕ ಸಮಷ್ಠಿ ಪ್ರಜ್ಞೆಯ ಧರ್ಮ ಯಾವುದೂ ಇಲ್ಲ ಎಂದು ಪ್ರತಿಪಾದಿಸಿದರು.  ಹನ್ನೆರಡನೇ ಶತಮಾನದ ಶರಣರ ವಚನಗಳು ಕೇವಲ ರಚನೆಗಳಲ್ಲ. ಒಂದು ಚಳವಳಿಯ ಉಪ ಉತ್ಪನ್ನಗಳು. ಕ್ರಾಂತಿಯ ಜತೆಜತೆಯಲ್ಲೇ ಸೃಷ್ಠಿಯಾದ ಸಾಹಿತ್ಯ ವಚನ ಸಾಹಿತ್ಯ. ಜಗತ್ತಿನ ಬೇರೆ ಯಾವುದೇ ಕ್ರಾಂತಿಗಳ ಹಿನ್ನೆಲೆಯೊಳಗೆ ಈ ತರಹದ ಸಾಹಿತ್ಯವನ್ನು ಕಾಣಲು ಸಾಧ್ಯವಿಲ್ಲ ಹೇಳಿದರು.  ದೇಶಕ್ಕೆ ಮೂರೂವರೆ ಸಾವಿರ ವರ್ಷಗಳಿಂದ ಸಂಪೂರ್ಣ ಸ್ವಾತಂತ್ರೃ ಸಿಕ್ಕಿಲ್ಲ. ದೇಶದ ಜನತೆ ಇಂದಿಗೂ ಸಾಂಸ್ಕೃತಿಕ ಗುಲಾಮಗಿರಿಯಲ್ಲಿ ಬದುಕುತ್ತಿದ್ದು, ದೇಶದ ಪ್ರಜಾಪ್ರಭುತ್ವಕ್ಕೆ ಸಾಂಸ್ಕೃತಿಕ ಗುಲಾಮಗಿರಿತನ ದೊಡ್ಡ ತೊಡಕಾಗಿದೆ. ಬಹುತ್ವ ಭಾರತದಲ್ಲಿ ವರ್ಣ ವ್ಯವಸ್ಥೆ ಸಮಸಮಾಜದ ನಿರ್ಮಾಣಕ್ಕೆ ಯಾವ ಕಾರಣದಿಂದಲೂ ಬಿಟ್ಟಿಲ್ಲ ಎಂದು ವಿಷಾದಿಸಿದರು.  ದೇಶದ ಚರಿತ್ರೆಯಲ್ಲಿ ಬುದ್ಧ, ಮಹಾವೀರ, ಬಸವಣ್ಣ ಗುರುನಾನಕ್ ಸೇರಿ ಅಸಂಖ್ಯ ತತ್ವ ಚಿಂತಕರು ವರ್ಣ ವ್ಯವಸ್ಥೆ ವಿರುದ್ಧ ಹೋರಾಡಿದ್ದಾರೆ. 12ನೇ ಶತಮಾನದ 41 ವಚನಕಾರರು ವೇದ, ಆಗಮ, ಪುರಾಣ ಮೊದಲಾದವುಗಳನ್ನು ಸಾರಾಸಗಟಾಗಿ ವಿರೋಧಿಸಿದ್ದರು ಎಂದು ಹೇಳಿದರು.  ರಾಜ್ಯದಲ್ಲಿ ತಳ ಸಮುದಾಯಗಳು ಶಿಕ್ಷಣಕ್ಕೆ ತೆರೆದುಕೊಂಡಿದ್ದು 12ನೇ ಶತಮಾನದಲ್ಲಿ. ವಚನಗಳು ಲಿಂಗಾಯತ ಧರ್ಮದ ನಿಜವಾದ ಪಠ್ಯಗಳು. ಮೌಢ್ಯಾಚರಣೆ ವಿರೋಧಿಸಿದ ಲಿಂಗಾಯತ ಧರ್ಮವನ್ನು ಎಲ್ಲರೂ ಅರ್ಥೈಸಿಕೊಳ್ಳುವ ಮೂಲಕ ಆಚರಣೆಗೆ ತರಬೇಕಾಗಿದೆ ಎಂದು ತಿಳಿಸಿದರು.  ಬಸವಣ್ಣ ಸಾಂಸ್ಕೃತಿಕ ನಾಯಕ ಏಕೆ? ವಿಷಯದ ಬಗ್ಗೆ ವಿಜಯಪುರದ ಶರಣ ತತ್ವ ಚಿಂತಕ ಡಾ.ಜೆ.ಎಸ್. ಪಾಟೀಲ ಉಪನ್ಯಾಸ ನೀಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ, ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ ಲೋಕೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಇತರರು ಇದ್ದರು. ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಅಧ್ಯಕ್ಷತೆ ವಹಿಸಿದ್ದರು.  ಸುನಿತಾ ಶಿವಯೋಗಿ ಸ್ವಾಗತಿಸಿದರು. ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಬಸವ ಬಳಗದ ಕಾರ್ಯದರ್ಶಿ ವೀಣಾ ಮಂಜುನಾಥ್ ವಂದಿಸಿದರು.  ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಹಯೋಗವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net