ಬ್ಯಾನರ್, ಬಂಟಿಂಗ್ ತೆರವಿಗೆ ಆಕ್ರೋಶ

dvg-banner-banting-23_20240124012957154.jpg
Published on

ದಾವಣಗೆರೆ : ಅಯೋಧ್ಯೆಯ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್, ಬಂಟಿಂಗ್ ಹಾಗೂ ಬಾವುಟಗಳನ್ನು ಏಕಾಏಕಿ ತೆರವು ಗೊಳಿಸುವುದನ್ನು ಖಂಡಿಸಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
 ನಗರದ ವಿವಿಧ ಕಡೆಗಳಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆಯುತಿದ್ದಂತೆ ಪಾಲಿಕೆಯ ಪ್ರತಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್ ಮತ್ತಿತರರು ಸ್ಥಳಕ್ಕೆ ತೆರಳಿ ವಿರೋಧ ವ್ಯಕ್ತಪಡಿಸಿದರು.
 ನಂತರ ವಿನೋಬನಗರ ಸಮೀಪ ಪಿಬಿ ರಸ್ತೆಯಲ್ಲಿ ಧರಣಿ ಕುಳಿತರು. ಪಾಲಿಕೆ ಅಧಿಕಾರಿಗಳು ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಯುಕ್ತರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಒಂದು ಹಂತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು.
 ಅಲ್ಲಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದರು. ಆಯುಕ್ತರ ವಿರುದ್ಧ ಧಿಕ್ಕಾರ ಕೂಗಿದರು.
 ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯರ ಕಟೌಟ್‌ಗಳು, ಧ್ವಜಗಳಿಂದ ಏನೂ ತೊಂದರೆಯಾಗುವುದಿಲ್ಲ. ಸಿದ್ದರಾಮಯ್ಯ ಅವರೇ, ನಿಮಗೂ ರಾಮನ ಆಶೀರ್ವಾದ ಬೇಕು ತಾನೆ? ಶ್ರೀರಾಮನ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಮಾಡಿದ್ದೀರಿ, ಹಿಂದು ಸಮಾಜಕ್ಕೆ ಅವಮಾನವಾಗುವುದನ್ನು ರಾಮನ ಭಕ್ತರು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
 ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಅನ್ಯ ಕೋಮಿನ ಧ್ವಜಗಳು ತಿಂಗಳುಗಟ್ಟಲೆ ಇದ್ದರೂ ಸರ್ಕಾರ ತೆರವುಗೊಳಿಸಿಲ್ಲ. ಮಂದಿರ ಉದ್ಘಾಟನೆಯಾಗಿ ಒಂದು ದಿನವೂ ಕಳೆದಿಲ್ಲ. ಆಗಲೇ ಕಟೌಟ್ ತೆರವು ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರ ಹಿಂದು ವಿರೋಧಿಯಾಗಿದೆ. ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ಕೆಲಸ ಮಾಡಬಾರದು ಎಂದು ಹೇಳಿದರು.
 ಪಾಲಿಕೆ ಸದಸ್ಯರ ಗಮನಕ್ಕೆ ತರದೇ ಯಾವುದೇ ಫ್ಲೆಕ್ಸೃ್ ತೆರವುಗೊಳಿಸದಂತೆ ಈ ಹಿಂದೆ ಮೂರು ಬಾರಿ ಮನವಿ ಮಾಡಿದ್ದರೂ ಏಕಾಏಕಿ ತೆರವುಗೊಳಿಸಿರುವುದು ಖಂಡನೀಯ ಎಂದು ಪಾಲಿಕೆ ಸದಸ್ಯ ಆರ್. ಶಿವಾನಂದ್ ತಿಳಿಸಿದರು.
 ಪ್ರತಿಭಟನಾಕಾರರ ಬಳಿಗೆ ಬಂದ ಆಯುಕ್ತೆ ರೇಣುಕಾ ಕ್ಷಮೆ ಯಾಚಿಸಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
 ಮಾಜಿ ಮೇಯರ್‌ಗಳಾದ ಎಸ್.ಟಿ. ವೀರೇಶ್, ಬಿ.ಜಿ. ಅಜಯ್ ಕುಮಾರ್, ಹಿಂದು ಸಂಘಟನೆ ಮುಖಂಡರಾದ ಸತೀಶ್ ಪೂಜಾರಿ, ಗುರು ಜೊಳ್ಳಿ, ಜಿಲ್ಲಾ ಬಿಜೆಪಿ ನಿಯೋಜಿತ ಅಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಡಾ.ಟಿ.ಜಿ. ರವಿಕುಮಾರ್, ಅರುಣ್ ಹುಗ್ಗೇಹಳ್ಳಿ, ಸಚಿನ್, ಶಂಕರ್, ದಂಡಪಾಣಿ ಇದ್ದರು.
 ...
 (ಕೋಟ್)
 ಇದು ಪಾಲಿಕೆಯ ಹಿಂದು ವಿರೋಧಿ ಧೋರಣೆಯನ್ನು ತೋರಿಸುತ್ತದೆ. ನಗರದ ಹಲವು ಭಾಗದಲ್ಲಿ ಅನ್ಯ ಧರ್ಮದ ಕಾರ್ಯಕ್ರಮ ಸಂಬಂಧಿ ಬಾವುಟ ಮತ್ತು ಬ್ಯಾನರ್‌ಗಳನ್ನು ಹಲವಾರು ತಿಂಗಳದರೂ ತೆರವುಗೊಳಿಸಿಲ್ಲ. ಪಾಲಿಕೆ ಅಧಿಕಾರಿಗಳು ಹಲವು ಕಡೆ ಕಟ್ಟಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಡೆ ಗಮನ ಕೊಡಲಿ. ಮುಂದಿನ ದಿನಗಳಲ್ಲಿ ಯಾರದೋ ಒತ್ತಡಕ್ಕೆ ಮಣಿದು, ಹಿಂದುಗಳ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು.
  ಕೆ. ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ
 ...
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net