ಕಷ್ಟ ಕಾಲದಲ್ಲಿ ಆಸರೆಯಾಗುವ ಕೇಂದ್ರದ ಯೋಜನೆಗಳು

siddesh.jpg
Published on

ದಾವಣಗೆರೆ : ಕೇಂದ್ರ ಸರ್ಕಾರದ ವಿಮಾ ಯೋಜನೆಗಳು ಕಷ್ಟ ಕಾಲದಲ್ಲಿ ಆಸರೆಯಾಗುವುದರಿಂದ ಅವುಗಳ ಪ್ರಯೋಜನ ಪಡೆಯುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದರು.
 ಲೀಡ್ ಬ್ಯಾಂಕ್ ಕಚೇರಿ ಮತ್ತು ಜಿಲ್ಲಾಮಟ್ಟದ ಬ್ಯಾಂಕರುಗಳ ಸಮಿತಿ ಆಶ್ರಯದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಹಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಪ್ರಧಾನಮಂತ್ರಿ ಜೀವನ್‌ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳಿಗೆ ನೋಂದಣಿ ಮಾಡಿಸಿದರೆ, ಅಪಘಾತ, ಸಾವು ಇನ್ನಿತರ ಸಂಕಷ್ಟದ ಸಂದರ್ಭಗಳಲ್ಲಿ ಫಲಾನುಭವಿಗಳ ಕುಟುಂಬಕ್ಕೆ ಸಹಾಯವಾಗುತ್ತದೆ ಎಂದು ತಿಳಿಸಿದರು.
 ಇವುಗಳ ಜತೆಗೆ ಅಟಲ್ ಪಿಂಚಣಿ, ಜನಧನ್, ಮುದ್ರಾ, ಸ್ವ-ನಿಧಿ ಮುಂತಾದ ಯೋಜನೆಗಳ ಉಪಯೋಗವನ್ನೂ ಪಡೆಯಬೇಕು. ಜೀವನ ಭದ್ರತೆಯ ಜತೆಗೆ ಆರ್ಥಿಕ ಪ್ರಗತಿಯನ್ನೂ ಸಾಧಿಸಬಹುದು ಎಂದು ಹೇಳಿದರು.
 ಈಗಾಗಲೇ ಜಿಲ್ಲೆಯಲ್ಲಿ 3 ಲಕ್ಷ ಜನರು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ, 1.38 ಲಕ್ಷ ಜನರು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಹೊಸದಾಗಿ 2 ಲಕ್ಷ ಜನರಿಗೆ ಜೀವನ್ ಸುರಕ್ಷಾ, 65 ಸಾವಿರ ಮಂದಿಗೆ ಜೀವನ್ ಜ್ಯೋತಿ ಯೋಜನೆಯಡಿ ವಿಮೆ ಮಾಡಿಸಲು ಬ್ಯಾಂಕುಗಳಿಗೆ ಗುರಿ ನಿಗದಿಪಡಿಸಲಾಗಿದೆ. ಈ ಬಗ್ಗೆ ಪ್ರಚಾರವಾಗಿ ಹೆಚ್ಚು ಜನರು ಈ ಯೋಜನೆಗಳ ವ್ಯಾಪ್ತಿಗೆ ಬರಬೇಕು ಎಂದು ತಿಳಿಸಿದರು.
 ಕೋವಿಡ್‌ನಿಂದ ಮೃತಪಟ್ಟ ಸಂದರ್ಭಗಳಲ್ಲಿ ಅಂಥವರ ಕುಟುಂಬ ಸದಸ್ಯರಿಗೆ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 2 ಲಕ್ಷ ರೂ. ಪರಿಹಾರ ದೊರೆತಿದೆ ಎಂದು ಮಾಹಿತಿ ನೀಡಿದರು.
 ದೇಶದಲ್ಲಿ 2014 ರಿಂದ ಇಲ್ಲಿಯವರೆಗೆ ಜನಧನ್ ಯೋಜನೆಯಡಿ 49.23 ಕೋಟಿ ಜನರು ಖಾತೆಗಳನ್ನು ತೆರೆದಿದ್ದಾರೆ, ಅವುಗಳಲ್ಲಿ 27 ಕೋಟಿ ಮಹಿಳೆಯರಿದ್ದಾರೆ. ಈ ಖಾತೆಗಳಲ್ಲಿ ಜನರು 2 ಲಕ್ಷ ಕೋಟಿ ರೂ.ಗಳನ್ನು ಇಟ್ಟಿದ್ದಾರೆ. 8.5 ಲಕ್ಷ ‘ಬ್ಯಾಂಕ್ ಮಿತ್ರ’ ಪ್ರತಿನಿಧಿಗಳು ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.
 ಆರ್ಥಿಕ ಪ್ರಗತಿಗೆ ಮುದ್ರಾ ಯೋಜನೆ ಸಹಕಾರಿಯಾಗಿದೆ. 9 ವರ್ಷಗಳಲ್ಲಿ ಲಕ್ಷಾಂತರ ಕೋಟಿ ರೂ. ಸಾಲ ನೀಡಲಾಗಿದೆ. 2 ಕೋಟಿ ಜನರು ಉದ್ಯೋಗ ಕಂಡುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದು ಹೇಳಿದರು.
 ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ವೈ.ವಿ.ಎನ್. ಶಿವಪ್ರಸಾದ್ ಮಾತನಾಡಿ, ಕೇಂದ್ರದ ವಿಮಾ ಮತ್ತು ಇತರ ಯೋಜನೆಗಳಿಗೆ ಬ್ಯಾಂಕುಗಳು ಸಹಕಾರ ನೀಡುತ್ತ ಬಂದಿವೆ ಎಂದರು.
 ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜಿ.ಸಿ. ಪ್ರಕಾಶ್ ಮಾತನಾಡಿ, ಕೇಂದ್ರದ ಈ ಯೋಜನೆಗಳ ಕುರಿತು ಜಿಲ್ಲೆಯ ಎಲ್ಲ 197 ಗ್ರಾಮ ಪಂಚಾಯಿತ ಮಟ್ಟದಲ್ಲಿ ಅಭಿಯಾನ ನಡೆಸಿ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.
 ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಪ್ರವೀಣ್ ಪ್ರಭಾಕರ್ ಮಾತನಾಡಿದರು. ಎಸ್‌ಬಿಐ ಅಧಿಕಾರಿ ಸೋಮನಾಥ್, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಪ್ರಬಂಧಕಿ ರಶ್ಮಿ ರೇಖಾ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ತಾವರ‌್ಯಾ ನಾಯ್ಕ ಇದ್ದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.
 ವಿವಿಧ ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ಸಾಲ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net