

ದಾವಣಗೆರೆ : ಬ್ಯಾಂಕುಗಳಲ್ಲಿ ಅಗತ್ಯ ನೇಮಕಾತಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬ್ಯಾಂಕ್ ಉದ್ಯೋಗಿಗಳು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ನಗರದ ಮಂಡಿಪೇಟೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನಾ ಮತಪ್ರದರ್ಶನ ನಡೆಸಿದರು. ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು. ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸಬೇಕು. ಉದ್ಯೋಗ ಭದ್ರತೆಯನ್ನು ರಕ್ಷಿಸಬೇಕು. ಬ್ಯಾಂಕ್ ಉದ್ಯೋಗಿಗಳ ಮೇಲಾಗುತ್ತಿರುವ ದಾಳಿಯಿಂದ ರಕ್ಷಣೆ ನೀಡಬೇಕು, ಐಡಿಬಿಐ ಬ್ಯಾಂಕಿನಲ್ಲಿ ಸರ್ಕಾರಿ ಬಂಡವಾಳವನ್ನು ಶೇ. 51ಕ್ಕಿಂತ ಹೆಚ್ಚಿರಬೇಕು, ಬ್ಯಾಂಕಿಂಗ್ ಸೇವೆಗಳನ್ನು ಹೊರಗುತ್ತಿಗೆ ನೀಡಬಾರದು ಎಂದು ಒತ್ತಾಯಿಸಿದರು. ಯುಎಫ್‌ಬಿಯು ಜಿಲ್ಲಾ ಸಂಚಾಲಕ ಕೆ. ರಾಘವೇಂದ್ರ ನಾಯರಿ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಮಾರ್ಚ್ 24 ಮತ್ತು 25 ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಮತಪ್ರದರ್ಶನ ಆಯೋಜಿಸಲಾಗಿದೆ ಎಂದರು. ಸರ್ಕಾರವು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಷ್ಕರವು ಅನಿವಾರ್ಯವಾಗಲಿದೆ ಎಂದು ತಿಳಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಸಂಘದ ಪ್ರಾದೇಶಿಕ ಕಾರ್ಯದರ್ಶಿ ಆರ್. ಶಂಕರಪ್ಪ, ಚಿತ್ರದುರ್ಗ ಮಹೇಶ್ವರಪ್ಪ, ನಿವೃತ್ತ ಬ್ಯಾಂಕ್ ನೌಕರರ ಸಂಘದ ಎಚ್.ಸುಗಿರಪ್ಪ ಮಾತನಾಡಿದರು. ಮುಷ್ಕರದ ನೇತೃತ್ವವನ್ನು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್‌ನ ಸದಸ್ಯ ಸಂಘಟನೆಗಳ ನಾಯಕರಾದ ಆರ್.ಆಂಜನೇಯ, ಎಚ್.ಎಸ್.ತಿಪ್ಪೇಸ್ವಾಮಿ, ಪ್ರದೀಪ್ ಪಾಟೀಲ್, ಸುನಿಲ್ ಕುಮಾರ್ ಎಸ್. ಮ್ಯಾಗೇರಿ, ಎಂ.ಎಸ್.ವಾಗೀಶ್, ಕೆ. ಗಂಗಾಧರ್, ದುರ್ಗಪ್ಪ, ಎಂ.ಡಿ.ವಿದ್ಯಾಸಾಗರ್, ಪರಶುರಾಮ, ಕೆ.ಜಯಲಕ್ಷ್ಮೀ, ಎನ್.ಜಿ.ಉಷಾ, ನಿಶಾ ಪಿಂಟೋ, ಭಾರತಿ, ಎಚ್.ಜೆ. ಆಶಾ, ರೇಣುಕಮ್ಮ, ಜೆ.ಟಿ. ಶಕ್ತಿಪ್ರಸಾದ್, ಗಾಯತ್ರಿ ಭಾಗವಹಿಸಿದ್ದರು.