ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲು ಒತ್ತಾಯ

IMG-20250115-WA0035.jpg
Published on

ದಾವಣಗೆರೆ : ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ, ರಾಜ್ಯ ಲಂಬಾಣಿ ಹಕ್ಕು ಹೋರಾಟ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳು ಆಗ್ರಹಿಸಿವೆ.  ಕರ್ನಾಟಕ ಬಂಜಾರ ಲಂಬಾಣಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಲಂಬಾಣಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಿಲ್ಲ. ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರನ್ನು ವಿಧಾನಸಭೆಯ ಉಪಸಭಾಧ್ಯಕ್ಷ ಮಾಡಿದ್ದು ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದರು.  ಲಂಬಾಣಿ ಸಮುದಾಯ ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚಿದೆ. ಸಮುದಾಯದ ಪರ ಧ್ವನಿ ಎತ್ತಲು ಯಾವೊಬ್ಬ ಸಚಿವ ಕೂಡ ಸಂಪುಟದಲ್ಲಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಲಂಬಾಣಿ ಸಮುದಾಯದ ಒಬ್ಬರಾದರೂ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಪಡೆಯುತ್ತಿದ್ದರು. ಇದೇ ಮೊದಲ ಬಾರಿಗೆ ಲಂಬಾಣಿ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣೀಭೂತರಾಗಿದ್ದೇವೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದಿದ್ದರೂ ಕೂಡ ಸಮುದಾಯದ ನಾಯಕರನ್ನು ಕಡೆಗಣಿಸಲಾಗಿದೆ. ಇದು ಹೀಗೆಯೇ ಮುಂದುವರಿದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳಲಿದ್ದು, ತಪ್ಪು ಸಂದೇಶ ರವಾನೆ ಆಗಲಿದೆ ಎಂದು ಎಚ್ಚರಿಕೆ ನೀಡಿದರು.  ಸಮುದಾಯದ ಮುಖಂಡರಾದ ಅರುಣ್ ಕುಮಾರ್ ನರೇನಹಳ್ಳಿ, ಹನುಮಂತ ನಾಯ್ಕ, ಮಂಜಾ ನಾಯ್ಕ, ಗಂಗಾ ನಾಯ್ಕ, ವೆಂಕಟೇಶ್ ನಾಯ್ಕ, ಲಿಂಗರಾಜ ನಾಯ್ಕ ಇದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net