

ದಾವಣಗೆರೆ : ಬಾಂಗ್ಲಾ ದೇಶದಲ್ಲಿ ಹಿಂದುಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ ಹಾಗೂ ಧಾರ್ಮಿಕ ಮುಖಂಡರ ಬಂಧನ ವಿರೋಧಿಸಿ ಹಿಂದು ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ಕಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತ, ಪಿಬಿ ರಸ್ತೆಯ ಮೂಲಕ ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಕೇಸರಿ ಶಲ್ಯ, ಹಣೆಗೆ ನಾಮ ಹಾಕಿಕೊಂಡು ಬಂದಿದ್ದ ಪ್ರತಿಭಟನಾಕಾರರು ಬಾಂಗ್ಲಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ‘ಕೋಮು ದ್ವೇಷ ನಿಲ್ಲಿಸಿ’, ‘ಬಾಂಗ್ಲಾದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಿ’ ಎಂದು ಬರೆದಿದ್ದ ಪ್ಲೆಕಾರ್ಡ್‌ಗಳನ್ನು ಅವರು ಪ್ರದರ್ಶಿಸಿದರು. ಇಸ್ಕಾನ್ ಸಂತರ ನೇತೃತ್ವದಲ್ಲಿ ಹರಿನಾಮ ಸಂಕೀರ್ತನೆ ಮಾಡಿದರು. ಇಸ್ಕಾನ್ ಸನ್ಯಾಸಿ ಚಿನ್ಮಯದಾಸ್ ಅವರನ್ನು ಅಲ್ಲಿನ ಸರ್ಕಾರ ಬಂಧಿಸಿರುವುದು ಅನ್ಯಾಯ. ಹಿಂದುಗಳ ಮೇಲಿನ ದೌರ್ಜನ್ಯಗಳು ತಕ್ಷಣವೇ ನಿಲ್ಲಬೇಕು. ಚಿನ್ಮಯದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು ಎಂದು ಪ್ರತಿಭಟನಾಕಾರರು ಬಾಂಗ್ಲಾ ಸರ್ಕಾರಕ್ಕೆ ಆಗ್ರಹಿಸಿದರು. ಭಾರತ ಸರ್ಕಾರವು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆಗಾಗಿ, ಅವರ ಮಾನವ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವುದು ವಿಶ್ವ ಸಮುದಾಯದ ಜವಾಬ್ದಾರಿಯಾಗಿದೆ ಎಂದರು. ಭಾರತವು ಪ್ರಪಂಚದಾದ್ಯಂತ ಕಿರುಕುಳಕ್ಕೊಳಗಾದ ವಲಸಿಗರಿಗೆ ಸಹಾಯ ಮಾಡಿಕೊಂಡು ಬಂದಿರುವಂತೆ ಬಾಂಗ್ಲಾದಲ್ಲಿರುವ ಹಿಂದುಗಳ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಮಿತಿ ಸಂಚಾಲಕ ಸತೀಶ ಪೂಜಾರಿ, ಹಿಂದುಪರ ಸಂಘಟನೆಗಳ ಹಿರಿಯ ಮುಖಮಡ ಕೆ.ಬಿ. ಶಂಕರ ನಾರಾಯಣ, ವಿಧಾನ ಪರಿಷತ್ ವಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಸದಸ್ಯರಾದ ಎಸ್.ಟಿ. ವೀರೇಶ್, ಬಿ.ಜಿ. ಅಜಯ ಕುಮಾರ್, ಕೆ.ಎಂ. ವೀರೇಶ್ ಇದ್ದರು. ಸಂಘದ ಪ್ರಮುಖರಾದ ರಾಮಚಂದ್ರ ವರುಣಬೈಲು, ಪ್ರವೀಣ್, ಅರುಣ್ ಗುಡ್ಡದಕೆರೆ, ಯೋಗೇಶ್ ಹೊಸಕೆರೆ, ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮಾಜಿ ಅಧ್ಯಕ್ಷ ವೀರೇಶ ಹನಗವಾಡಿ, ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಪಿ.ಸಿ. ಶ್ರೀನಿವಾಸ್, ಎಚ್.ಎನ್. ಶಿವಕುಮಾರ್, ಬೆಳ್ಳೂಡಿ ಮಂಜುನಾಥ್, ಗೋಪಾಲಗೌಡ, ಡಾ.ಎಸ್.ಆರ್. ಹೆಗಡೆ ಭಾಗವಹಿಸಿದ್ದರು.