

ದಾವಣಗೆರೆ : ನಗರದ ಯುಬಿಡಿಟಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೇಮೆಂಟ್ ಕೋಟಾ ಜಾರಿಗೆ ತಂದಿರುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದ ಯುಬಿಡಿಟಿ ಕಾಲೇಜು ಉಳಿಸಿ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಗಾಂಧಿ ವೃತ್ತ, ಜಯದೇವ ವೃತ್ತ, ವಿದ್ಯಾರ್ಥಿ ಭವನ ವೃತ್ತ, ಅಶೋಕ ರಸ್ತೆ, ಪಿ.ಬಿ. ರಸ್ತೆ, ಹದಡಿ ರಸ್ತೆ ಇನ್ನಿತರ ಕಡೆಗಳಲ್ಲಿ ಅಂಗಡಿಗಳು ಅರ್ಧ ದಿನ ಬಾಗಿಲು ತೆರೆಯಲಿಲ್ಲ. ಎವಿಕೆ ಕಾಲೇಜು ರಸ್ತೆ, ಚರ್ಚ್ ರಸ್ತೆ, ಶಾಮನೂರು ರಸ್ತೆ ಸೇರಿದಂತೆ ಉಳಿದೆಡೆ ವಾಣಿಜ್ಯ ವಹಿವಾಟು ಎಂದಿನಂತೆ ನಡೆಯಿತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು. ನಗರ ಸಾರಿಗೆ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಆಟೋ, ದ್ವಿಚಕ್ರ ವಾಹನ ಸಂಚಾರ ಸಹಜವಾಗಿತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಬೆಳಗ್ಗೆ ಭೇಟಿ ನೀಡಿದ ಹೋರಾಟ ಸಮಿತಿಯ ಕಾರ್ಯಕರ್ತರು ಬಂದ್ ಬೆಂಬಲಿಸುವಂತೆ ಮನವಿ ಮಾಡಿಕೊಂಡರು. ಬಸ್ ಸಂಚಾರ ಸ್ಥಗಿತಗೊಳಿಸಿ ಹೋರಾಟಕ್ಕೆ ಕೈಜೋಡಿಸುವಂತೆ ಕೋರಿಕೊಂಡರು. ಬೆಳಗ್ಗೆ ಕೆಲ ಹೊತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೇವೆ ಲಭ್ಯವಾಗಲಿಲ್ಲ. ದ್ವಿಚಕ್ರ ವಾಹನಗಳಲ್ಲಿ ಗುಂಪು ಗುಂಪಾಗಿ ಸಂಚರಿಸಿದ ಪ್ರತಿಭಟನಾಕಾರರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು. ಮಾರುಕಟ್ಟೆಗೆ ಭೇಟಿ ನೀಡಿದಾಗ ಅದಾಗಲೇ ಹಣ್ಣು, ತರಕಾರಿ, ಹೂ ಮಾರಾಟ ನಡೆಯುತ್ತಿತ್ತು. ವಹಿವಾಟು ಸ್ಥಗಿತಗೊಳಿಸಿ ಹೋರಾಟಕ್ಕೆ ಸಹಕಾರ ನೀಡುವಂತೆ ಕೋರಿಕೊಂಡರು. ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು ಹೋರಾಟಕ್ಕೆ ಜತೆಯಾದರು. ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಹೋರಾಟಗಾರರು ಅಲ್ಲಿಂದ ಮೆರವಣಿಗೆ ಹೊರಟು ಅಶೋಕ ರಸ್ತೆ ಮೂಲಕ ಗಾಂಧಿ ವೃತ್ತ ತಲುಪಿದರು. ರೈಲು ನಿಲ್ದಾಣ ಮುಂಭಾಗ ಬಹಿರಂಗ ಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ... * ವಿದ್ಯಾರ್ಥಿಗಳ ಬಂಧನ, ಬಿಡುಗಡೆ ಸಾರಿಗೆ ಬಸ್ ಸಂಚಾರ ತಡೆದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಸ್‌ಗಳು ಹೊರ ಹೋಗದಂತೆ ವಿದ್ಯಾರ್ಥಿಗಳು ಧರಣಿ ಕುಳಿತಿದ್ದರು. ಸೋನೆ ಮಳೆಯಲ್ಲಿ ಹೋರಾಟ ಮುಂದುವರಿಸಿದ್ದರು. ಒತ್ತಾಯ ಪೂರ್ವಕವಾಗಿ ಬಸ್ ತಡೆಯದಂತೆ ಪೊಲೀಸರು ಎಚ್ಚರಿಕೆ ನೀಡಿದರು. ಇದಕ್ಕೆ ಮಣಿಯದೇ ಇದ್ದಾಗ ಬಂಧನ ಮಾಡಲಾಯಿತು. ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ವಿದ್ಯಾರ್ಥಿಗಳ ಬಂಧನವನ್ನು ಖಂಡಿಸಿದರು. ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದರು. ಸುರಿಯುತ್ತಿದ್ದ ಮಳೆಯಲ್ಲಿಯೇ ಮಾನವ ಸರಪಳಿ ರಚಿಸಿ ಘೋಷಣೆಗಳನ್ನು ಕೂಗಿದರು. ಕೆಲ ಹೊತ್ತಿನ ಬಳಿಕ ಬಂಧಿತರನ್ನು ಬಿಡುಗಡೆ ಮಾಡಲಾಯಿತು. ರೈತರು, ಕಾರ್ಮಿಕರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದರು. ಬಹಿರಂಗ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸುನಿತ್ ಕುಮಾರ್, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರ್ ನಾಯ್ಕ, ಹಿರೇಮಠ್, ಗುಮ್ಮನೂರು ಬಸವರಾಜ, ಐಗೂರು ಸುರೇಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ನಿವೃತ್ತ ಪ್ರಾಚಾರ್ಯ ಕೆ.ಎಸ್. ಈಶ್ವರಪ್ಪ, ಪ್ರಮುಖರಾದ ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, ಪೂಜಾ ನಂದಿಹಳ್ಳಿ, ಸೌಮ್ಯಾ, ಭಾರತಿ, ಬನಶ್ರೀ, ಆವರಗೆರೆ ಚಂದ್ರು, ಸತೀಶ್ ಅರವಿಂದ್, ಅವಿನಾಶ್ (ಅಭಿ), ಲೀಲಾ ಮಾಗಾನಹಳ್ಳಿ ಭಾಗವಹಿಸಿದ್ದರು.