

ದಾವಣಗೆರೆ : ನಗರದ ಎಂ.ಸಿ.ಸಿ.‘ಎ’ ಬ್ಲಾಕ್‌ನ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ಸೋಮವಾರ ಸಾವಿರಾರು ಭಕ್ತರು ಆಗಮಿಸಿ ಬಾಬಾ ಪಾದುಕೆ ದರ್ಶನ ಪಡೆದರು. ಇಡೀ ದೇವಸ್ಥಾನವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾದ ದರ್ಶನದ ಸಾಲು ರಾತ್ರಿಯ ವರೆಗೂ ನಿರಂತರವಾಗಿತ್ತು. ಶಿರಡಿ ಸಾಯಿಬಾಬಾ ಅವರು ತಮ್ಮ ಜೀವಿತಾವಧಿಯಲ್ಲಿ ಧರಿಸುತ್ತಿದ್ದ ಪಾದುಕೆಗಳನ್ನು ಮುಟ್ಟುವ ಮೂಲಕ ಭಕ್ತರು ಧನ್ಯತಾ ಭಾವವನ್ನು ಅನುಭವಿಸಿದರು. ಭಕ್ತರಿಗಾಗಿ ವಿಶೇಷ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಶಿರಡಿಯಿಂದ ಬಂದಿದ್ದ ಅರ್ಚಕರ ತಂಡ ಶಿರಡಿಯಲ್ಲಿ ನಡೆಯುವ ಮಾದರಿಯಲ್ಲೇ ಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು. ಮಧ್ಯಾಹ್ನ ಹಾಗೂ ಸಂಜೆ ಆರತಿ ನೆರವೇರಿತು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಉದ್ಯಮಿ ಅಥಣಿ ವೀರಣ್ಣ, ಜವಳಿ ವರ್ತಕರಾದ ಬಿ.ಸಿ. ಉಮಾಪತಿ, ಬಿ.ಸಿ. ಚಂದ್ರಶೇಖರ್, ಎಸ್ಪಿ ಉಮಾ ಪ್ರಶಾಂತ್ ಸೇರಿ ಅನೇಕ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು.