ಗ್ರಾಮೀಣ ಭಾಗಕ್ಕೂ ಪಸರಿಸಲಿ ಆಯುರ್ವೇದ

dvg-ayurveda.jpg
Published on

ದಾವಣಗೆರೆ : ಆಯುರ್ವೇದಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ಈ ಪದ್ಧತಿಯ ಚಿಕಿತ್ಸೆ ಗ್ರಾಮೀಣ ಭಾಗಕ್ಕೂ ಪಸರಿಸುವಂತಾಗಲಿ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಷಿಯೇಷನ್, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಶ್ರೀ ಧನ್ವಂತರಿ ಆಯುರ್ವೇದ ಔಷಧಗಳ ಪ್ರತಿನಿಧಿಗಳ ಸಂಘ, ಆಯುರ್ವೇದ ಔಷಧ ವಿತರಕರು ಮತ್ತು ಮಾರಾಟಗಾರರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ, ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯ ಸರ್ಕಾರಿ ಸಂಯುಕ್ತ ಆಯುಷ್ ಆಸ್ಪತ್ರೆಯಲ್ಲಿ ‘ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ‘ ಎಂಬ ಘೋಷವಾಕ್ಯದೊಂದಿಗೆ 10ನೇ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ರಾಜರ ಆಳ್ವಿಕೆಯಲ್ಲಿ ಆಯುರ್ವೇದವನ್ನು ಹೆಚ್ಚಿನದಾಗಿ ಬಳಕೆ ಮಾಡಲಾಗುತ್ತಿತ್ತು. ಇಂದು ಆಯುರ್ವೇದ ಚಿಕಿತ್ಸೆ ಪಡೆಯುವ ಸಲುವಾಗಿ ದೇಶ ವಿದೇಶಗಳಿಂದ ಭಾರತಕ್ಕೆ ಬರುತ್ತಾರೆ. ವಿದೇಶಗಳಲ್ಲಿಯೂ ಈ ಚಿಕಿತ್ಸೆ ಬಳಕೆಯಲ್ಲಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆದರೂ ಕೆಲವರು ನಮ್ಮಲ್ಲಿಯೇ ಸಿಗುವ ಆಯುರ್ವೇದ ಬಳಸಲು ಹಿಂದೇಟು ಹಾಕುತ್ತಾರೆ.  ಹಾಗಾಗಿ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.  ಜಿಲ್ಲೆಯಲ್ಲಿ 25 ಆಯುಷ್ ಚಿಕಿತ್ಸಾ ಕೇಂದ್ರಗಳಿವೆ. ಇವುಗಳಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯಲಿದೆ. ಆಯುಷ್ ಇಲಾಖೆ ವತಿಯಿಂದ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಂತಾಗಬೇಕು. ಆಯುರ್ವೇದ ಅಧಿಕಾರಿಗಳು ಜನ ಸಾಮಾನ್ಯರಿಗೆ ತಕ್ಷಣ ಸ್ಪಂದಿಸಬೇಕು. ಆಯುರ್ವೇದ ಚಿಕಿತ್ಸೆ ಪಡೆಯುವುದರಿಂದ ಕಾಯಿಲೆಗಳಿಂದ ಸಂಪೂರ್ಣ ಮುಕ್ತಿ ಹೊಂದಬಹುದು ಎಂದರು.  ಕೆಜಿಎಎಂಒಎ ಅಧ್ಯಕ್ಷ ಡಾ. ದೇವ್ಯಾನಾಯ್ಕ್, ಕಾರ್ಯದರ್ಶಿ ಡಾ.ಸುಧಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಡಾ. ಮಲ್ಲಿಕಾರ್ಜುನ್, ಡಾ.ಲಿಂಗರಾಜು ಹಾಗೂ ಹಿರಿಯ ವೈದ್ಯ ಡಾ.ಸುರೇಶ್ ಕುಮಾರ್, ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net