ಉದ್ಯಮಶೀಲತೆ ಪ್ರೋತ್ಸಾಹಿಸುವ ‘ಮಂಥನ್’

dvg-biet_20250325002850017.jpg
Published on

ದಾವಣಗೆರೆ :  ಯುವಜನರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು ‘ಮಂಥನ್’ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ನಿರ್ದೇಶಕಿ ಬಿ.ಎ. ತೇಜಶ್ರೀ ಹೇಳಿದರು.  ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ, ‘ಮಂಥನ್’ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.  ಎಫ್‌ಕೆಸಿಸಿಐ 108 ವರ್ಷಗಳಿಂದ ಉದ್ಯಮಿಗಳ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ಮಂಥನ್’ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ ಎಂದು ಮಾಹಿತಿ ನೀಡಿದರು.  ಸಂಸ್ಥೆಯು ವಿದ್ಯಾರ್ಥಿಗಳಲ್ಲಿರುವ ವಿನೂತನ ಆಲೋಚನೆಗಳಿಗೆ ಬೆನ್ನುತಟ್ಟಿ, ಅಗತ್ಯ ಮಾರ್ಗದರ್ಶನ ನೀಡುತ್ತ ಬಂದಿದೆ. ಈ ಬಾರಿ 17ನೇ ಆವೃತ್ತಿಯ ಮಂಥನ್ ಕಾರ್ಯಕ್ರಮ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮ ಬಿಜಿನೆಸ್ ಐಡಿಯಾಗಳನ್ನು ಮಾ. 31ರ ಒಳಗಾಗಿ ಸಂಸ್ಥೆಗೆ ಸಲ್ಲಿಸಬೇಕು. ಆಯ್ಕೆಯಾದ ಪರಿಕಲ್ಪನೆಗಳಿಗೆ 10 ಲಕ್ಷ ರೂ. ವರೆಗೆ ಬಹುಮಾನ ನೀಡಲಾಗುವುದು. ಇದುವರೆಗೆ 330 ಕ್ಕೂ ಹೆಚ್ಚು ಪ್ರಸ್ತಾವಗಳು ಬಂದಿವೆ ಎಂದರು.  ಸಮಾಜದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಹುಡುಕುವ ಆವಿಷ್ಕಾರಗಳನ್ನು ಕೈಗೆತ್ತಿಕೊಳ್ಳಬೇಕು. ನಮ್ಮ ಮನಸ್ಥಿತಿ ಹೇಗಿರಬೇಕು, ಎದುರಾಗುವ ಸವಾಲುಗಳೇನು, ಯಶೋಗಾಥೆಗಳು, ಬೆಲೆ ನಿಗದಿ, ಮಾರುಕಟ್ಟೆ, ಬ್ರಾೃಂಡಿಂಗ್ ಸೇರಿ ಹಲವು ವಿಚಾರಗಳ ಕುರಿತು ಮಾರ್ಗದರ್ಶನ ನೀಡಲಾಗುವುದು. ಯುವಜನರಿಗೆ ನೆರವಾಗಲು ಸಹಾಯವಾಣಿಯನ್ನೂ ಆರಂಭಿಸಲಾಗಿದೆ ಎಂದು ಹೇಳಿದರು.  ಎಫ್‌ಕೆಸಿಸಿಐ ವ್ಯಾಪ್ತಿಯಲ್ಲಿ 35 ಸಾವಿರ ಉದ್ಯಮಿಗಳಿದ್ದಾರೆ. 25 ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಗಳಿವೆ. ಅವರೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಬೆಂಗಳೂರಿನಿಂದ ಹೊರಗೆ ಇರುವವರಿಗಾಗಿ ಪ್ರಾದೇಶಿಕ ಅರಿವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.  ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಉದ್ಯಮಿಗಳಾಗ ಬಯಸುವ ವಿದ್ಯಾರ್ಥಿಗಳ ಚಿಂತನಾ ಕ್ರಮ ಬದಲಾಗುತ್ತದೆ. ಹೊಸಬರ ಜತೆಗೆ ಒಡನಾಟ ಬೆಳೆಯುತ್ತದೆ. ಉದ್ಯಮಿಗಳ ಸಂಪರ್ಕ ಸಾಧ್ಯವಾಗುತ್ತದೆ. ಮಂಥನ್ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬೇಕು ಎಂದು ಮನವಿ ಮಾಡಿದರು.  ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ತಮ್ಮ ಕಾಲೇಜು ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಮೂಲಕ ಅನೇಕ ವಿಷ್ಕಾರಗಳನ್ನು ಮಾಡಿಸುತ್ತ ಬಂದಿದೆ. ಇಂಥ ಚಟುವಟಿಕೆ ಕೈಗೊಳ್ಳಲು ಶಿಕ್ಷಣ ಸಂಸ್ಥೆಗಳಿಗೆ ಅನುದಾನ ದೊರೆಯುವುದು ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.  ಅಡಕೆ ತ್ಯಾಜ್ಯದಿಂದ ಉಪ ಉತ್ಪನ್ನ ತಯಾರಿಸಬಹುದು. ಹೀಗೆ ಸ್ಥಳೀಯ ಸಮಸ್ಯೆಗಳು, ಸಂಪನ್ಮೂಲಗಳನ್ನು ಗುರುತಿಸಿ ಅದರಿಂದ ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎಂದು ಚಿಂತನೆ ನಡೆಸಬೇಕು. ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚಾಗಿ ನಡೆಯಬೇಕು. ವಿದೇಶಗಳಿಂದ ಆಮದಾಗುವ ವಸ್ತುಗಳ ಮೇಲೆಯೇ ಅವಲಂಬಿಸುವುದು ತಪ್ಪಬೇಕು. ನಮ್ಮದೇ ಆದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಆಶಿಸಿದರು.  ಎಫ್‌ಕೆಸಿಸಿಐ ಕೋರ್ ಕಮಿಟಿ ಸದಸ್ಯ ವಿನ್ಸೆಂಟ್ ಡಿಸೌಜಾ, ಡಾ. ಭಾನುಮತಿ, ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net