ಉತ್ತಮ ಸಮಾಜಕ್ಕಾಗಿ ಭ್ರಷ್ಟಾಚಾರ ತಡೆಗಟ್ಟಿ

DVG-LOKAYUKTA-28.jpg
Published on

ದಾವಣಗೆರೆ : ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಹೇಳಿದರು.  ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜು ಸಮಾಜಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ಲೋಕಾಯುಕ್ತ ಸಹಯೋಗದಲ್ಲಿ ಕಾಲೇಜು ಆವರಣದ ಪಾರ್ವತಮ್ಮ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧದ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವುದು ಅಧಿಕಾರಿಗಳ ಕೆಲಸ. ಯಾವುದೇ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದರೆ ಅದರ ಪರಿಣಾಮ ಎಲ್ಲರ ಮೇಲೆ ಆಗಲಿದ್ದು, ಇದನ್ನು ಸಂಪೂರ್ಣ ತಡೆಗಟ್ಟುವ ಅಗತ್ಯವಿದೆ ಎಂದು ತಿಳಿಸಿದರು.  ದೇಶದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹೆಸರುವಾಸಿಯಾಗಿದೆ. ಅಧಿಕಾರಿಗಳು ಮಾಡುವ ಕೆಲಸದಲ್ಲಿ ಭ್ರಷ್ಟಾಚಾರ, ಪಕ್ಷಪಾತ, ದುರಾಡಳಿತದ ಬಗ್ಗೆ ನಿಗಾ ವಹಿಸಲಿದೆ. ದೂರು ದಾಖಲಾದ ಸಂದರ್ಭದಲ್ಲಿ ತನಿಖೆ ನಡೆಸುವ ಮೂಲಕ ಸರ್ಕಾರಕ್ಕೆ ಸಲ್ಲಿಸಿ ನಿಯಮಾವಳಿಯಡಿ ದಂಡನೆ ವಿಧಿಸುವ ಕೆಲಸ ಮಾಡಲಿದೆ ಎಂದರು.  ವಿದ್ಯಾರ್ಥಿಗಳು ದೇಶದ ಕಾನೂನು ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಜಾಗೃತರಾಗಬೇಕು. ಇದರಿಂದ ಜನತೆ ಭ್ರಷ್ಟಾಚಾರಕ್ಕೆ ಬಲಿಪಶು ಆಗುವುದನ್ನು ತಪ್ಪಿಸಬಹುದು ಹಾಗೂ ಸಮಾಜದಲ್ಲಿ ಎಲ್ಲಿಯೇ ಆಗಲಿ ಭ್ರಷ್ಟಾಚಾರ ಕಂಡುಬಂದರೆ ಅದನ್ನು ಪ್ರತಿಭಟಿಸಬೇಕು. ಅಸಮರ್ಥತೆ ಎಲ್ಲಿರುತ್ತದೋ ಅಲ್ಲಿ ಲಂಚ ಹುಟ್ಟಿಕೊಳ್ಳುತ್ತದೆ ಎಂದು ಹೇಳಿದರು.  ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಲು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮತ್ತೊಬ್ಬರ ಐಷಾರಾಮಿ ಜೀವನ ನೋಡಿ ಅನುಕರಿಸದೆ ಜೀವನದ ಇತಿಮಿತಿ ಅರಿತು ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.  ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಮಧುಸೂದನ್ ಮಾತನಾಡಿ, ಪಂಚಾಯಿತಿ ಅಧಿಕಾರಿಯಿಂದ ಹಿಡಿದು ಮುಖ್ಯಮಂತ್ರಿವರೆಗೆ ಜನಸಾಮಾನ್ಯರ ಸೇವೆ ಮಾಡಲು ಬಂದಿದ್ದು, ಶಿಷ್ಟಾಚಾರದೊಂದಿಗೆ ಕೆಲಸ ನಿರ್ವಹಿಸಬೇಕು. ಲಾಭದ ಉದ್ದೇಶಕ್ಕೆ ಹುದ್ದೆ ಬಳಸಿಕೊಂಡರೆ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು.  ಅಧಿಕಾರಿಗಳು ಯಾವುದೇ ಕೆಲಸ ಮಾಡಿಕೊಡಲು ಲಂಚ ಕೇಳಿದರೆ ಮೇಲಧಿಕಾರಿ ಅಥವಾ ಲೋಕಾಯುಕ್ತ ಪ್ರಾಧಿಕಾರಕ್ಕೆ ದೂರು ಸಲ್ಲಿಸಬೇಕು. ಆಗ ಅಂಥವರ ವಿರುದ್ಧ ಕ್ರಮ ಜರುಗಿಸಲು ಅನುಕೂಲ ಆಗಲಿದೆ. ಲಂಚ ಪಡೆಯುವುದು ತಿಳಿದರೂ ಸುಮ್ಮನಿರುವುದು ತಪ್ಪು ಎಂದರು.  ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಕಲಾವತಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸಿ.ಮಧುಸೂದನ್, ಪ್ರಭು ಬಿ. ಸೂರಿನ, ಪಿ.ಸರಳಾ ಇದ್ದರು. ಕಾಲೇಜಿನ ಪ್ರಾಚಾರ್ಯೆ ಪ್ರೊ.ಜಿ.ಸಿ.ನೀಲಾಂಬಿಕೆ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್.ರಾಘವೇಂದ್ರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net