

ದಾವಣಗೆರೆ : ಮಗುವಿನ ದೈಹಿಕ ಆರೋಗ್ಯ, ಭೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಎಲ್ಲ ಹಂತದಲ್ಲಿ ಪೋಷಕರು ಆದ್ಯತೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಹರಿಹರ ತಾಲೂಕು ಭಾನುವಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಎಂ.ಟಿ.ಪಿ ಕಾಯ್ದೆ, ಪಿ.ಎನ್.ಡಿ.ಪಿ ಕಾಯ್ದೆ ಕುರಿತು ಬುಧವಾರ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೋಕ್ಸೋ ಕಾಯ್ದೆ 2012ನ್ನು ಲೈಂಗಿಕ ಹಲ್ಲೆ, ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಜಾರಿಗೆ ತರಲಾಗಿದೆ. ಈ ಕಾಯ್ದೆಯು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯಾವುದೇ ಮಕ್ಕಳನ್ನು ಮಗು ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. 16 ರಿಂದ 18 ವರ್ಷ ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಕನಿಷ್ಠ 10 ವರ್ಷ ಸೆರೆವಾಸ, ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಬಹುದು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಕನಿಷ್ಠ 20 ವರ್ಷ ಸೆರೆವಾಸ, ಜೀವನದ ಉಳಿದ ಅವಧಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆಯುವುದಿಲ್ಲ. ದುಷ್ಕೃತ್ಯಕ್ಕೆ ನೇರವಾಗಿ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದವರಿಗೂ ಈ ಕಾಯ್ದೆಯಡಿ ಶಿಕ್ಷೆ ಇದೆ ಎಂದರು. ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತೆರೆದ ಮನೆ ಕಾರ್ಯಕ್ರಮದಡಿ ಶಾಲಾ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಕುರಿತು ಶಾಲಾ ಶಿಕ್ಷಣ ಇಲಾಖೆಯು ಪ್ರತಿ ಶಾಲೆಗಳಲ್ಲಿ ಬಿಡುವಿನ ವೇಳೆ, ಸಂದರ್ಭಾನುಸಾರ ಬೋಧನಾ ಅವಧಿ, ವಿವಿಧ ಸಾಂಸ್ಕೃತಿಕ ಚಟುವಟಿಕೆ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಪಾಲಕರ ಸಭೆ, ತಾಯಂದಿರ ಸಭೆ, ಕಾರ್ಯಕ್ರಮಗಳಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು. ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಸಮೀಕ್ಷೆ ಪ್ರಕಾರ ಕೇವಲ 35 ಪ್ರತಿಶತ ಮಕ್ಕಳಿಗೆ ಹಾಗೂ 32 ಪ್ರತಿಶತ ಪಾಲಕರಿಗೆ ಪೋಕ್ಸೋ ಕಾಯ್ದೆ ಬಗ್ಗೆ ಅರಿವಿದೆ ಎಂದು ತಿಳಿದು ಬಂದಿದೆ. 18 ವರ್ಷದ ಒಳಗಿನ ಬಾಲಕ, ಬಾಲಕಿಯರು ಎಲ್ಲರೂ ಮಕ್ಕಳೆ. ಇವರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ತಡೆಗಟ್ಟುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಆರ್.ಎಲ್. ಕಾನೂನು ಕಾಲೇಜು ವಿಶ್ರಾಂತ ಪ್ರಾಚಾರ್ಯ ಡಾ.ಎಂ. ಸೋಮಶೇಖರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ, ಹರಿಹರ ತಾಪಂ ಇಒ ರಾಮಕೃಷ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಸುರೇಶ ಸಗರಿ, ಹಿರಿಯ ವೈದ್ಯಾಧಿಕಾರಿ ಡಾ. ಪ್ರಶಾಂತ್ ಇತರರು ಇದ್ದರು.