

ಕಿರು ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿಕೆ 16.52 ಕೋಟಿ ಸಾಲ ಮಂಜೂರು ವಿಜಯವಾಣಿ ಸುದ್ದಿಜಾಲ ದಾವಣಗೆರೆ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ 653 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 200 ಅರ್ಜಿಗಳಿಗೆ 16.52 ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದು ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು. ಜಿ.ಪಂ, ಕೃಷಿ ಇಲಾಖೆ ಹಾಗೂ ಆತ್ಮನಿರ್ಭರ ಭಾರತ ಅಭಿಯಾನದ ಸಹಯೋಗದಲ್ಲಿ ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಗೊಳಿಸುವಿಕೆ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತ ಕುಟುಂಬ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರ ಹಾಗೂ ಮಹಿಳೆಯರ ಬಲವರ್ಧನೆಗೊಳಿಸಲು 2020 ರಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಯಿತು. ಇದರ ಮೂಲಕ ರೈತ ತಾನು ಬೆಳೆದ ಬೆಳೆಗೆ ನಿಗದಿತ ಬೆಲೆ ತರುವ ಮೂಲಕ ಸ್ಥಳೀಯವಾಗಿ ಬೆಳೆದ ರೈತ ಉತ್ಪನ್ನ, ಸಿರಿಧಾನ್ಯ ಬಳಸಿ ಸಣ್ಣ ಉದ್ದಿಮೆದಾರ, ಸ್ವ-ಸಹಾಯ ಸಂಘದ ಮಹಿಳೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ಮೌಲ್ಯವರ್ಧನೆ ಗೊಳಿಸಬೇಕು. ಆಗ ರೈತ ಬೆಳೆದ ಬೆಳೆಗೆ ಉತ್ಪನ್ನ ಮಾರಾಟಗಾರರಿಗೆ ಸಮನಾದ ಬೆಲೆ ಸಿಗಲಿದೆ. ಉತ್ಪಾದಕರು ತಯಾರಿಸಿದ ಉತ್ಪನ್ನಕ್ಕೆ ಬ್ರ್ಯಾಂಡಿಂಗ್, ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಬೆಂಬಲ ಬೆಲೆ ನೀಡಿ ವ್ಯಾಪಾರ ವಹಿವಾಟು ಹೆಚ್ಚಿಸಲು ಸಹಾಯ ಮಾಡಲಾಗುವುದು ಎಂದು ತಿಳಿಸಿದರು. ಪ್ರಮುಖವಾಗಿ ಮಹಿಳೆಯರನ್ನು ಸಬಲೀಕರಣ ಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸಣ್ಣ ಉದ್ದಿಮೆದಾರರು, ರೈತರು ವಿಶೇಷವಾಗಿ ಯುವಕರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ವಿನೂತನ ಶೈಲಿಯಲ್ಲಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಜಿ.ಪಂ. ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹಿರೇಮಠ್, ನಬಾರ್ಡ್ ಸಂಸ್ಥೆಯ ಮುಖ್ಯಸ್ಥೆ ರಶ್ಮಿ ರೇಖಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಘವೇಂದ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಇದ್ದರು. ಜಿ.ಪಂ. ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ವ್ಯಸನಮುಕ್ತವಾಗುವ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು. ಉಪ ಕೃಷಿ ನಿರ್ದೇಶಕ ಎಸ್. ಅಶೋಕ್ ಸ್ವಾಗತಿಸಿದರು.