ಶರಣರ ತತ್ವ ಪಾಲಿಸಿದ ಮಾಗನೂರು ಬಸಪ್ಪ

maganuru.jpg
Published on

ದಾವಣಗೆರೆ : ಆರೂಢ ದಾಸೋಹಿ ಮಾಗನೂರು ಬಸಪ್ಪ ಅವರು ಶರಣರ ತತ್ವಗಳನ್ನು ಅಕ್ಷರಶಃ ಪಾಲಿಸಿ ಆದರ್ಶದ ಬದುಕು ಸಾಗಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.
 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
 ಶರಣರ ಕ್ರಾಂತಿ ಜಗತ್ತಿನಲ್ಲೇ ಅಪರೂಪ. ಆ ಪರಂಪರೆಗೆ 875 ವರ್ಷಗಳ ಇತಿಹಾಸವಿದೆ. ಕಾಯಕ, ದಾಸೋಹ, ಸಮಾನತೆ, ಮಾನವೀಯತೆ ಅದರ ತತ್ವಗಳು. ಪ್ರಪಂಚದ ಯಾವ ಸಾಹಿತ್ಯದಲ್ಲೂ 12ನೇ ಶತಮಾನಕ್ಕಿಂತ ಮೊದಲು ಇಂಥ ಕ್ರಾಂತಿ ಬಂದಿರಲಿಲ್ಲ. ದಲಿತರು, ಹಿಂದುಳಿದವರನ್ನು ಕಟ್ಟಿಕೊಂಡು, ಅವರಿಗೆ ಅಕ್ಷರಾಭ್ಯಾಸ ಮಾಡಿಸಿ ಅವರಿಂದ ಸಾಹಿತ್ಯ ನಿರ್ಮಾಣ ಮಾಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
 ಮಾಗನೂರು ಬಸಪ್ಪ ಅವರು ಕಾಯಕದಿಂದಲೇ ಮುಂದೆ ಬಂದರು. ವಚನ ಸಾಹಿತ್ಯವನ್ನು ಕರಗತ ಮಾಡಿಕೊಂಡು ಅದರಂತೆಯೇ ನಡೆದುಕೊಂಡವರು. ತ್ರಿಕರ್ಣ ಶುದ್ಧಿಯಿಂದ ಕೆಲಸ ಮಾಡಿದರು. ಬಡವರು, ದಲಿತರು, ಹಿಂದುಳಿದವರು, ನೋವುಂಡವರಿಗೆ ನೆರವು ನೀಡಿದರು. ಬೇರೆಯವರ ನೋವನ್ನು ತಮ್ಮ ನೋವೆಂದು ಭಾವಿಸಿ ಮಾನವೀಯ ಮೌಲ್ಯ ಪಾಲಿಸಿದರು ಎಂದು ಬಣ್ಣಿಸಿದರು.
 ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ ಮಾತನಾಡಿ, ಮಾಗನೂರು ಬಸಪ್ಪ ಅವರ ಜೀವನ ಇತರರಿಗೆ ಮಾದರಿ. ಅವರಂತೆ ಬದುಕಿದರೆ ದೇಶದಲ್ಲಿ ಹಿಂಸೆ, ಅತ್ಯಾಚಾರ, ವ್ಯಭಿಚಾರ, ಭ್ರಷ್ಟಾಚಾರ ಇರುವುದೇ ಇಲ್ಲ ಎಂದು ತಿಳಿಸಿದರು.
 ಯಾವುದೇ ಪ್ರಶಸ್ತಿಗಳು ಮಾರಾಟದ ವಸ್ತುಗಳಾಗಬಾರದು. ಇಂದಿನ ವ್ಯವಸ್ಥೆಯಲ್ಲಿ ಅಧಿಕಾರಿಗಳು ಜನರ ಕೆಲಸ ಮಾಡಲು ಸೋಮಾರಿತನ ತೋರುತ್ತಾರೆ. ಜನಪ್ರತಿನಿಧಿಗಳಿಂದ ಒತ್ತಡ ತಂದು ಕೆಲಸ ಮಾಡಿಸಿಕೊಳ್ಳುವ ಸಂದರ್ಭ ಬರಬಾರದು. ಜನ ಸಾಮಾನ್ಯರನ್ನೂ ಗೌರವದಿಂದ ಕಾಣುವಂತಾಗಬೇಕು ಎಂದು ಹೇಳಿದರು.
 ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರ ಹೆಸರುಗಳನ್ನು ಹೇಳಿ, ಅವರ ವಿಚಾರಗಳನ್ನು ಪಾಲಿಸದಿದ್ದರೆ ಅದಕ್ಕೆ ಅರ್ಥವಿಲ್ಲ. ಸ್ವಾಮೀಜಿಗಳು ಜನ ಸಾಮಾನ್ಯರಿಗೆ ನೀತಿ ಹೇಳಬೇಕು. ಸಮಾಜದಲ್ಲಿ ಮೌಢ್ಯ ಬಿತ್ತುವುದು, ಶೋಷಣೆ ನಿಲ್ಲಬೇಕಿದೆ ಎಂದು ತಿಳಿಸಿದರು.
 ನಮ್ಮಲ್ಲಿ ಮಾನವೀಯತೆ ಇರಬೇಕು. ದೇಶ, ಪ್ರಜಾಪ್ರಭುತ್ವವನ್ನು ಉಳಿಸೋಣ. ಅಂಬೇಡ್ಕರ್, ಬಸವಣ್ಣ ಅವರ ವಿಚಾರಗಳನ್ನು ಜೀವಂತವಾಗಿ ಇರಿಸೋಣ ಎಂದು ಅಭಿಪ್ರಾಯಪಟ್ಟರು.
 ಚಿಕ್ಕಮಗಳೂರಿನ ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡರು, ಸುನಂದಾ ದೇವಿ, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಇದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಪ್ರಾಸ್ತಾವಿಕ ಮಾತನಾಡಿದರು. ಬಿ. ದಿಳ್ಯಪ್ಪ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net