ಅಂಬೇಡ್ಕರ್ ಪ್ರಶಸ್ತಿಗೆ ರುದ್ರಪ್ಪ ಹನಗವಾಡಿ ಆಯ್ಕೆ

dvg-Rudrappa-Hanagavadi.jpg
Published on

ದಾವಣಗೆರೆ : ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ (2023ನೇ ಸಾಲಿಗೆ), ಆಡಳಿತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ, ದಾವಣಗೆರೆ ಜಿಲ್ಲೆಯ ರುದ್ರಪ್ಪ ಹನಗವಾಡಿ ಆಯ್ಕೆಯಾಗಿದ್ದಾರೆ.  ಮೂಲತಃ ಹರಿಹರ ತಾಲೂಕು ಹನಗವಾಡಿ ಗ್ರಾಮದವರಾದ ರುದ್ರಪ್ಪ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದವರು. 1983 ರಲ್ಲಿ ಕರ್ನಾಟಕ ಆಡಳಿತ ಸೇವೆಗೆ ಬಂದು ತಹಸೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಯಾಗಿಯೂ ಕೆಲಸ ಮಾಡಿದವರು.  ಕೃಷಿಕರಾಗಿ, ಸಾಹಿತ್ಯ, ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.  ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ.  ‘ಅಂಬೇಡ್ಕರ್ ಅವರ ಹೆಸರಿನ ಪ್ರಶಸ್ತಿ ನನಗೆ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಜನಪರವಾಗಿ ಮಾಡಿದ ಕೆಲಸಗಳನ್ನು ಗುರುತಿಸಿರುವುದಕ್ಕೆ ಸಂತೋಷವಾಗಿದೆ’ ಎಂದು ರುದ್ರಪ್ಪ ಹನಗವಾಡಿ ಪ್ರತಿಕ್ರಿಯೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net