ಮುದ್ರಣ ಮಾಧ್ಯಮಕ್ಕೆ ಅಸ್ತಿತ್ವದ ಸವಾಲು

dvg-award-feb-13.jpg
Published on

ದಾವಣಗೆರೆ  : ತಂತ್ರಜ್ಞಾನ ಬದಲಾದಂತೆ ಮುದ್ರಣ ಮಾಧ್ಯಮಕ್ಕೆ ಅಸ್ತಿತ್ವದ ಸವಾಲು ಎದುರಾಗಿದೆ ಎಂದು ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಆತಂಕ ವ್ಯಕ್ತಪಡಿಸಿದರು.  ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗದ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ. ಸುರೇಶ್ ಅವರಿಗೆ 2024 ರ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.  ಆನ್‌ಲೈನ್ ಮುನ್ನೆಲೆಗೆ ಬರುತ್ತಿದ್ದಂತೆ ಮುದ್ರಣ ಮಾಧ್ಯಮ ಹಿಂದೆ ಸರಿಯುತ್ತಿದೆ. ಬ್ರೇಕಿಂಗ್ ನ್ಯೂಸ್ ಪೈಪೋಟಿ ಪತ್ರಿಕೆಗಳನ್ನು ಸೊರಗುವಂತೆ ಮಾಡಿದೆ. ಈ ಆತಂಕಗಳ ನಡುವೆಯೂ ಪತ್ರಿಕೆಗಳು ಒಳ್ಳೆಯ ವಿಚಾರಗಳನ್ನು ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದರು.  ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ವಿ. ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ವಕೀಲ ರಾಮಚಂದ್ರ ಕಲಾಲ್, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ, ಮಹಾಂತೇಶ ಒಣರೊಟ್ಟಿ, ವೀಣಾ ಇದ್ದರು.  ಬಳಗದ ಸಾಲಿಗ್ರಾಮ ಗಣೇಶ್ ಶೆಣೈ ಸ್ವಾಗತಿಸಿದರು. ರಾಘವೇಂದ್ರ ನಾಯರಿ ನಿರೂಪಿಸಿದರು. ರುದ್ರಾಕ್ಷಿಬಾಯಿ ಪ್ರಾರ್ಥಿಸಿದರು. ಸಿ.ಕೆ. ಆನಂದ ತೀರ್ಥಾಚಾರ್, ಸತ್ಯಭಾಮಾ, ವೆಂಕಟೇಶ್, ಭಾರತಿ, ಜಗದೀಶ್ ಕೂಲಂಬಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net