

ದಾವಣಗೆರೆ : ನಗರದ ನಮನ ಅಕಾಡೆಮಿಯ ಸಂಸ್ಥಾಪಕ ಕಾರ‌್ಯದರ್ಶಿ ವಿದುಷಿ ಡಿ.ಕೆ. ಮಾಧವಿ ಅವರಿಗೆ ಭರತನಾಟ್ಯ ಕ್ಷೇತ್ರದಲ್ಲಿ ನೀಡಿದ ಮಹತ್ವದ ಕೊಡುಗೆಗಾಗಿ, ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ವತಿಯಿಂದ ನೀಡುವ ‘ಏಷ್ಯಾ ಪೆಸಿಫಿಕ್ ಐಕಾನಿಕ್ ಅವಾರ್ಡ್ 2025’ ಪ್ರಶಸ್ತಿ ಲಭಿಸಿದೆ. ಇಂಡೋನೇಷ್ಯಾದ ಬಾಲಿಯ ಏಸ್ಟಿನ್ ಕಾನ್ಫರೆನ್ಸ್ ಹಾಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಧವಿ ಅವರು ಭರತನಾಟ್ಯ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡುವಲ್ಲಿ ನೀಡಿದ ಕೊಡುಗೆಗೆ ಈ ಗೌರವ ದೊರೆತಿದೆ. ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್‌ನ ಉನ್ನತ ಸದಸ್ಯರು ಅವರ ಸಾಧನೆಯನ್ನು, ಭರತನಾಟ್ಯದ ಮೂಲಕ ವಿಶ್ವಶಾಂತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ತೇಜಿಸಲು ಮಾಡಿದ ಪ್ರಯತ್ನವನ್ನು ಹೊಗಳಿದರು. ದೇಶ ವಿದೇಶದ ಗಣ್ಯರು, ಕಲಾವಿದರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿದ್ದರು.