

ದಾವಣಗೆರೆ : ಹುಟ್ಟು, ಸಾವಿನ ಮಧ್ಯೆ ನಡೆಯುವ ಬದುಕು ಸಾರ್ಥಕ ಆಗಬೇಕಾದರೆ ಪಂಚ ಋಣಗಳನ್ನು ತೀರಿಸಬೇಕು ಎಂದು ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಭಾನುವಾರ, ಸೋಮೇಶ್ವರೋತ್ಸವ-2025ರ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾತೃ, ಪಿತೃ, ಗುರು, ದೈವ ಹಾಗೂ ಗ್ರಾಮ ಋಣಗಳನ್ನು ತೀರಿಸುವ ಪುಣ್ಯ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಮಕ್ಕಳು ಹೆತ್ತವರ ಮಾರ್ಗದರ್ಶನದಲ್ಲಿ ಬೆಳೆದಾಗ ಬದುಕು ಪಾವನವಾಗುತ್ತದೆ ಎಂದು ತಿಳಿಸಿದರು. ಮನುಷ್ಯನಿಗೆ ಜ್ಞಾನ ಸಂಪತ್ತೇ ದೊಡ್ಡದು. ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂಬುದನ್ನು ಜ್ಞಾನ ಶಕ್ತಿಯಿಂದ ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು. ಸನಾತನ ಧರ್ಮ, ಪರಂಪರೆ ಹಾಗೂ ದೇಶ ಸೇವೆಯ ಗುಣ ಹೊಂದಿದ ಸದ್ಗುಣಿಗಳ ಸಂಗ ಮಾಡುವುದರಿಂದ ಜೀವನದಲ್ಲಿ ಶ್ರೇಷ್ಠ ಮಾರ್ಗ ಲಭಿಸುತ್ತದೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಜೀವಿತಾವಧಿಯಲ್ಲಿ ಎಲ್ಲರಿಗೂ ಒಳಿತನ್ನು ಮಾಡುತ್ತ ಧರ್ಮ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಸಾಧಕರನ್ನು ಗೌರವಿಸುವ ಸೋಮೇಶ್ವರ ಸಂಸ್ಥೆಯ ಗುಣ ಶ್ಲಾಘನೀಯ. ಇತರರಿಗೂ ಇದು ಪ್ರೇರಣೆಯಾಗಿದೆ. ಸಂಸ್ಥೆಯು ಜ್ಞಾನ ದಾಸೋಹದ ಜತೆಗೆ ಸಂಸ್ಕೃತಿ, ಕಲೆಗೆ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು. ಡಿಡಿಪಿಐ ಜಿ. ಕೊಟ್ರೇಶ್ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಜತೆಗೆ ಹೆಚ್ಚಿನ ಸಮಯ ಕಳೆಯಬೇಕು. ಅವರ ವಿದ್ಯಾಭ್ಯಾಸದ ಬಗ್ಗೆ ದಿನನಿತ್ಯ ಗಮನಿಸಬೇಕು. ಅವರಲ್ಲಿ ಮೌಲ್ಯ, ಸಂಸ್ಕೃತಿ, ಸಂಸ್ಕಾರ ಹೆಚ್ಚಿಸಬೇಕು. ಅವರು ತಪ್ಪು ದಾರಿ ಹಿಡಿದರೆ ಸರಿ ದಾರಿಗೆ ತರಬೇಕು ಎಂದರು. ಜವಳಿ ವರ್ತಕ ಬಿ.ಸಿ. ಉಮಾಪತಿ ಮಾತನಾಡಿ, ಮಕ್ಕಳು ವಿದ್ಯಾವಂತರಾದರೆ ಅವರ ಮನೆತನ ಸೇರಿದಂತೆ ದೇಶವೂ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ನಮ್ಮ ಸಂಪ್ರದಾಯ, ಸಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಗಳ ಬಗ್ಗೆ ತಿಳಿಯಬೇಕು ಎಂದು ಹೇಳಿದರು. ಚಿತ್ರನಟ ರಮೇಶ್ ಅರವಿಂದ ಅವರು, ನಿವೃತ್ತ ಶಿಕ್ಷಕ ಮಳಲಕೆರೆ ಗುರುಮೂರ್ತಿ ಅವರಿಗೆ ‘ಸೋಮೇಶ್ವರ ಶಿಕ್ಷಣ ಸಿರಿ’, ವಿಜಯವಾಣಿ ವಿಶೇಷ ವರದಿಗಾರ ರಮೇಶ ಜಹಗೀರದಾರ್, ಪತ್ರಕರ್ತೆ ದೇವಿಕಾ ಸುನೀಲ್, ಕೆ. ಸುಮತಿ ಮತ್ತು ಗೌರಮ್ಮ ಕಲಿವೀರಪ್ಪ ಅವರಿಗೆ ‘ಸೋಮೇಶ್ವರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದರು. ಸಂಸ್ಥೆಯ ಅಧ್ಯಕ್ಷ ಕೆ.ಎಂ ಸುರೇಶ್, ಎಚ್.ಆರ್. ಅಶೋಕ ರೆಡ್ಡಿ, ಮಾಜಿ ಸೈನಿಕ ಸಿದ್ದಯ್ಯ, ಮುಖ್ಯ ಶಿಕ್ಷಕಿ ಗಾಯತ್ರಿ, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಪಿ.ಎನ್. ಪರಮೇಶಪ್ಪ, ಜಯಶ್ರೀ ಇದ್ದರು. ... (ಬಾಕ್ಸ್) ವೀಕೆಂಡ್ ಹರಟೆ ವಿತ್ ರಮೇಶ್ ಸೋಮೇಶ್ವರೋತ್ಸವದಲ್ಲಿ ಪಾಲ್ಗೊಂಡಿದ್ದ ನಟ ರಮೇಶ ಅರವಿಂದ್ ಹಾಗೂ ಗಾಯಕಿ ಎಂ.ಡಿ. ಪಲ್ಲವಿ ಅವರು ನಡೆಸಿಕೊಟ್ಟ ಹಾಡು, ಹರಟೆ ಕಾರ್ಯಕ್ರಮ ರಂಜಿಸಿತು. ಗಾಯಕಿ ಪಲ್ಲವಿ ಪ್ರಶ್ನೆಗಳನ್ನು ಕೇಳುವ ಮೂಲಕ ರಮೇಶ್ ಅವರ ಜೀವನದ ಸ್ವಾರಸ್ಯಕರ ಪ್ರಸಂಗಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟರು. ರಮೇಶ್ ಅವರು ತಮ್ಮ ಬದುಕನ್ನೇ ರಿವೈಂಡ್ ಮಾಡಿ, ತಂದೆ, ತಾಯಿಯಿಂದ ಕಲಿತ ಪಾಠ, ಶಾಲಾ ದಿನಗಳಲ್ಲಿ ಕಲಿತ ವಿಚಾರ, ವೃತ್ತಿ ಬದುಕು, ವೈಯಕ್ತಿಕ ಬದುಕಿನ ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಜೀವನದಲ್ಲಿ ಭಯವನ್ನು ಕಿತ್ತು ಬಿಸಾಕಿ. ಕಷ್ಟಪಟ್ಟರೆ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಇನ್ನೊಬ್ಬರ ದಾರಿಯಲ್ಲಿ ಹೋಗಬೇಡಿ, ನಿಮ್ಮ ದಾರಿ ಕಂಡುಕೊಳ್ಳಿ. ನೀವು ಏನು ಮಾಡಿದರೂ ಶ್ರೇಷ್ಠವಾಗಿರಲಿ. ಅಗತ್ಯ ವಿಷಯಗಳನ್ನು ಮುಂದೂಡಬೇಡಿ ಎಂದು ಮಕ್ಕಳಿಗೆ ಬದುಕಿನ ಟಿಪ್ಸ್ ಹೇಳಿದರು. ಎಂ.ಡಿ. ಪಲ್ಲವಿ ಅವರು ‘ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’, ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಗೀತೆಗಳನ್ನು ಹಾಡಿದರೆ, ಯುವ ಗಾಯಕ ಅನಿರುದ್ಧ ಶಾಸ್ತ್ರಿ ‘ಈ ಅಮೃತ ಧಾರೆ’ ಹಾಡನ್ನು ಪ್ರಸ್ತುತಪಡಿಸಿದರು.