ಮಹಿಳೆಯರಿಗೆ ಶಿಕ್ಷಣ ಪ್ರಬಲ ಅಸ್ತ್ರ

DVG-JAGRUTA-2.jpg
Published on

ದಾವಣಗೆರೆ :  ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮಹಿಳೆಯರಿಗೆ ಶಿಕ್ಷಣ ಒಂದು ಪ್ರಬಲ ಅಸ್ತ್ರವಾಗಿದೆ ಎಂದು ರಾಜ್ಯ ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮುರುಗೇಂದ್ರಪ್ಪ ಹೇಳಿದರು.  ಎಂಸಿಸಿ ಬಿ ಬ್ಲಾಕ್‌ನ ಕುವೆಂಪು ನಗರದ ಜಾಗೃತ ಮಹಿಳಾ ಸಂಘದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿ.ವಿಮಲಾದಾಸ್ ಸೇವಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.  ಅನಕ್ಷರತೆಯಿಂದಾಗಿ ಸಮಾಜದಲ್ಲಿ ಅನೇಕ ಮಹಿಳೆಯರು ಶೋಷಣೆ ಅನುಭವಿಸುವಂತಾಗಿದೆ. ಇದರಿಂದ ಹೊರಬರಲು ಶಿಕ್ಷಣ ಅತ್ಯವಶ್ಯಕ. ವಿದ್ಯೆಯ ಜತೆಗೆ ಧೈರ್ಯವಂತರಾಗಿ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.   ಸಮಾಜದಲ್ಲಿ ನೊಂದವರಿಗೆ ಸ್ಪಂದಿಸಿ ನ್ಯಾಯ ಒದಗಿಸುವುದು ಸುಲಭದ ಕಾರ್ಯ ಅಲ್ಲ. ಜಾಗೃತ ಮಹಿಳಾ ಸಂಘವು ಶೋಷಿತರಿಗೆ ಆಶ್ರಯದ ಜತೆಗೆ ಬದುಕು ಕಟ್ಟಿಕೊಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.  ಪ್ರೊ. ವಿಮಲಾದಾಸ್ ಅವರು ಒಬ್ಬ ದಿಟ್ಟ ಮಹಿಳೆಯಾಗಿದ್ದರು. ಎವಿಕೆ ಕಾಲೇಜು ಪ್ರಾಚಾರ್ಯರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅವರು ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಾಗೃತ ಮಹಿಳಾ ಸಂಘಕ್ಕೆ ಅವರು ಭದ್ರ ಬುನಾದಿ ಹಾಕಿದ್ದಾರೆ ಎಂದು ಸ್ಮರಿಸಿದರು.  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ ಮಾತನಾಡಿ, ಆಧುನಿಕ 21ನೇ ಶತಮಾನದಲ್ಲೂ ಸಾಮಾಜಿಕ ಅನಿಷ್ಟಗಳ ಜತೆಗೆ ಮಹಿಳಾ ಶೋಷಣೆ ಮುಂದುವರಿದಿದ್ದು, ಮಹಿಳೆಯರು ಹೆಜ್ಜೆ ಹೆಜ್ಜೆಗೂ ಹೋರಾಟ ನಡೆಸಬೇಕಾಗಿದೆ ಎಂದು ವಿಷಾದಿಸಿದರು.  ದೇಶದಲ್ಲಿ ಸ್ತ್ರೀಯರ ರಕ್ಷಣೆಗೆ ಅನೇಕ ಕಾನೂನು ಜಾರಿಯಲ್ಲಿದ್ದರೂ ಮಹಿಳೆಗೆ ತಾನು ಅಬಲೆ ಎಂಬ ಭಯ ಕಾಡುತ್ತಿದೆ. ಆಧುನಿಕ ಕಾಲಘಟ್ಟದಲ್ಲೂ ಮೇಲು-ಕೀಳು ತಾರತಮ್ಯ ಸರಿಯಲ್ಲ. ಮಹಿಳೆಯರಿಗೆ ಸ್ವಾತಂತ್ರೃ ಕೊಟ್ಟರೆ ತನ್ನ ಕರ್ತೃತ್ವ ಶಕ್ತಿಯಿಂದ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ ಎಂದು ತಿಳಿಸಿದರು.  ಜಾಗೃತ ಮಹಿಳಾ ಸಂಘದ ಕಾರ್ಯದರ್ಶಿ ಅಮಿನಾಬಾನು ಪ್ರಾಸ್ತಾವಿಕ ಮಾತನಾಡಿ, ಜಾಗೃತ ಮಹಿಳಾ ಸಂಘದಲ್ಲಿ ಶೋಷಿತರಿಗೆ ಆಶ್ರಯ ನೀಡುವ ಜತೆಗೆ ಮಾನಸಿಕ ಸ್ಥೈರ್ಯ ತುಂಬಿ ಕುಟುಂಬದೊಂದಿಗೆ ಸೇರಿಸುವ ಕೆಲಸ ಮಾಡಲಾಗುತ್ತಿದೆ. ಹಲವರಿಗೆ ಶಿಕ್ಷಣ ಕೊಡಿಸುವ ಜತೆಗೆ ಕೌಶಲ ತರಬೇತಿ ಸಹ ನೀಡಲಾಗಿದೆ ಎಂದು ಹೇಳಿದರು.  ಎಜು ಏಷಿಯಾ ವಿದ್ಯಾಸಂಸ್ಥೆ ಸಂಸ್ಥಾಪಕಿ ನೀಲಮ್ಮ ಮಾಗಾನಹಳ್ಳಿ ಅವರಿಗೆ ವಿಮಲಾದಾಸ್ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜಾಗೃತ ಮಹಿಳಾ ಸಂಘದ ಜಂಟಿ ಕಾರ್ಯದರ್ಶಿ ಶಾಂತಮ್ಮ ದಿಳ್ಳೆಪ್ಪ, ಉಪಾಧ್ಯಕ್ಷೆ ಆಶಾ ಕಲ್ಲನಗೌಡರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net