ಆಟೋ ರ‌್ಯಾಲಿ ವೇಳೆ ಮಾತಿನ ಚಕಮಕಿ

dvg-auto-rally.jpg
Published on

ದಾವಣಗೆರೆ : ವಿಜಯದಶಮಿ ಮಹೋತ್ಸವ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಸಾರ್ವಜನಿಕ ವಿಜಯ ದಶಮಿ ಸಮಿತಿ ವತಿಯಿಂದ ನಗರದಲ್ಲಿ ಶನಿವಾರ ಆಟೋ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು.  ಈ ವೇಳೆ ಹೈಸ್ಕೂಲ್ ಮೈದಾನಕ್ಕೆ ಆಗಮಿಸಿದ ಸಂಚಾರ ಪೊಲೀಸರು ಮತ್ತು ರ‌್ಯಾಲಿ ಆಯೋಜಕರ ನಡುವೆ ಮಾತಿನ ಚಕಮಕಿ ನಡೆಯಿತು. ರ‌್ಯಾಲಿಯಲ್ಲಿ ಪಾಲ್ಗೊಂಡಿರುವ ಆಟೋ ಚಾಲಕರ ಚಾಲನಾ ಪರವಾನಗಿ, ಎಮಿಷನ್ ಟೆಸ್ಟ್ ಪ್ರಮಾಣಪತ್ರ ಇನ್ನಿತರ ದಾಖಲೆಗಳನ್ನು ಪರಿಶೀಲಿಸುವುದಾಗಿ ಸಂಚಾರ ಠಾಣೆಯ ಸಿಪಿಐ ಮಂಜುನಾಥ ನಲುವಾಗಲು ಹೇಳಿದ್ದು ಚಕಮಕಿಗೆ ಕಾರಣವಾಯಿತು.  ಅನ್ಯ ಧರ್ಮೀಯರ ಹಬ್ಬದಲ್ಲಿ ಬೈಕ್‌ನಲ್ಲಿ ಮೂವರು ಸವಾರರು ಇದ್ದರೂ ಪ್ರಶ್ನಿಸುವುದಿಲ್ಲ. ಹಿಂದುಗಳ ಹಬ್ಬದ ಆಟೋ ರ‌್ಯಾಲಿಯಲ್ಲಿ ಡಿ.ಎಲ್ ಕೇಳುವ ಮೂಲಕ ಅಡ್ಡಿ ಪಡಿಸುತ್ತಿದ್ದಾರೆ ಎಂದು ಹಿಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.  ನಾವು ಕಾನಾನು ಪಾಲನೆ ಮಾಡುತ್ತೇವೆ. ಆದರೆ ತಾರತಮ್ಯ ಮಾಡಿದರೆ ಸಹಿಸುವುದಿಲ್ಲ. ಆಟೋ ರ‌್ಯಾಲಿಗೆ ಯಾರೂ ಹೊಸಬರು ಬಂದಿಲ್ಲ. ಎಲ್ಲ ದುಡಿಮೆ ಮಾಡುವವರು. ಆಟೋ ಚಾಲನೆಯಲ್ಲಿ ಪರಿಣಿತರೇ ಇದ್ದಾರೆ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.  ನಂತರ ಆಟೋ ರ‌್ಯಾಲಿಗೆ ಚಾಲನೆ ನೀಡಲಾಯಿತು. ಹೈಸ್ಕೂಲ್ ಮೈದಾನದಿಂದ ಶುರುವಾದ ರ‌್ಯಾಲಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚರಿಸಿ ಹೈಸ್ಕೂಲ್ ಮೈದಾನದಲ್ಲೇ ಕೊನೆಗೊಂಡಿತು.  ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ, ರಾಜನಹಳ್ಳಿ ಶಿವಕುಮಾರ್, ಪಿ.ಸಿ. ಶ್ರೀನಿವಾಸ್, ಹಿಂದುಪರ ಸಂಘಟನೆಯ ವಿನಾಯಕ ರಾನಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net