

ದಾವಣಗೆರೆ : ಮಹಿಳೆಯೊಬ್ಬರು ಗುರುವಾರ ರಾತ್ರಿ ಆಟೋದಲ್ಲಿ ಬಿಟ್ಟು ಹೋಗಿದ್ದ 1 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಆಜಾದ್ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ. ನಜ್ಮಾ ಎಂಬುವರು ನಗರದ ರೈಲು ನಿಲ್ದಾಣ ಮುಂಭಾಗದಲ್ಲಿ ಆಟೋ ರಿಕ್ಷಾ ಬಾಡಿಗೆ ಮಾಡಿಕೊಂಡು ಬೀಡಿ ಲೇಔಟ್ ಬಳಿ ಇಳಿದು, ಮನೆಗೆ ಹೋಗಿ ನೋಡಿದಾಗ ಚಿನ್ನದ ಆಭರಣಗಳಿದ್ದ ಬ್ಯಾಗನ್ನು ಆಟೋದಲ್ಲಿ ಮರೆತು ಬಿಟ್ಟಿರುವುದು ಗಮನಕ್ಕೆ ಬಂದಿದೆ. ಆಗ ಆ ಮಹಿಳೆ ಆಜಾದ್ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆಟೋ ರಿಕ್ಷಾ ಮತ್ತು ಚಾಲಕನನ್ನು ಪತ್ತೆ ಮಾಡಿ, ಬ್ಯಾಗ್‌ನಲ್ಲಿದ್ದ 15 ಗ್ರಾಂ ತೂಕದ ಬಂಗಾರದ ಕಿವಿಯೋಲೆ, ಮಕ್ಕಳ ಬಟ್ಟೆ, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಆಟೋ ಚಾಲಕನ ಉಪಸ್ಥಿತಿಯಲ್ಲಿ ದೂರುದಾರರಿಗೆ ಹಸ್ತಾಂತರಿಸಿದರು. ನಗರ ಉಪ ವಿಭಾಗ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಂತೆ ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಜಿ. ಅಶ್ವಿನ್ ಕುಮಾರ್ ಹಾಗೂ ಸಿಬ್ಬಂದಿ ಮಂಜುನಾಥ ನಾಯ್ಕ್, ಎ.ಪಿ. ನರೇಶ್, ಗುಗ್ಗರಿ ಲೋಕೇಶ್, ಖಾಜಾ ಹುಸೇನ್, ಎನ್. ಕೃಷ್ಣ, ಜಿ.ಆರ್. ವೆಂಕಟೇಶ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.