

ದಾವಣಗೆರೆ : ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ವಿರುದ್ಧ ರಾಜ್ಯ ಸರ್ಕಾರ ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದನ್ನು ರದ್ದುಪಡಿಸಬೇಕು ಎಂದು ಜಿಲ್ಲಾ ಗಂಗಾಮತಸ್ಥರ (ಬೆಸ್ತರ್) ಸಂಘ ಆಗ್ರಹಿಸಿದೆ. ಸಂಘದ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು. ಸರ್ಕಾರದ ಲೋಪದೋಷಗಳು ಮತ್ತು ವೈಫಲ್ಯಗಳ ಬಗ್ಗೆ ಧ್ವನಿ ಎತ್ತುವ ಹಿಂದುಳಿದ ವರ್ಗಗಳ ಮುಖಂಡ ರವಿಕುಮಾರ್ ಅವರ ಮೇಲೆ ಮೊಕದ್ದಮೆ ದಾಖಲಿಸಿರುವುದು ಖಂಡನೀಯ. ಕಾಯ್ದೆ ದುರ್ಬಳಕೆ ಮಾಡುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಗಂಗಾಮತಸ್ಥರ (ಬೆಸ್ತರ್) ಸಂಘ ಹಾಗೂ ಜಿಲ್ಲಾ ಗಂಗಾಮತ ಸಮಾಜದ ಮುಖಂಡರಾದ ನಿಂಗರಾಜ್ ಹಾವನೂರ್, ವಾಗೀಶ್, ಚಂದ್ರಪ್ಪ, ಮಂಜುನಾಥ ಗುತ್ತೂರು, ಆರ್. ರವಿಕುಮಾರ್, ಎಚ್. ಗಣೇಶ್, ಡಿ.ಕೆ. ಶ್ರೀನಿವಾಸ, ಎಸ್. ಚಂದ್ರಪ್ಪ ಇದ್ದರು.